Advertisement

ಮಂಗಳೂರು ಮನಪಾ ಗೆಲುವು ನಿರೀಕ್ಷಿತ: ಕೋಟ

12:36 AM Nov 16, 2019 | mahesh |

ಕಾಪು: ಮಂಗಳೂರು ಮಹಾ ನಗರಪಾಲಿಕೆಯ ಚುನಾವಣಾ ಫಲಿತಾಂಶ ನಾವು ನಿರೀಕ್ಷಿಸಿದ ರೀತಿಯಲ್ಲಿಯೇ ಬಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ಮನಪಾ ವ್ಯಾಪ್ತಿಯಲ್ಲಿ ವಿವಿಧ ಮೂಲ ಸೌಕರ್ಯಗಳ ಜೋಡಣೆ ಸಹಿತ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಮ್ಮ ಮಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಂಪೂರ್ಣವಾಗಿ ಪ್ರಯತ್ನಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಕಾಪುವಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭೂತಪೂರ್ವ ಗೆಲುವಿಗೆ ಮತದಾರರು ಮತ್ತು ಕಾರ್ಯಕರ್ತರೇ ಮುಖ್ಯ ಕಾರಣರು. ಬಹುಮತವನ್ನು ನೀಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಹಾಗೂ ಸ್ಥಳೀಯ ಶಾಸಕರಿಗೆ, ವಿಶೇಷವಾಗಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಜಿಲ್ಲಾ ಅಧ್ಯಕ್ಷರಿಗೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಅನಗತ್ಯ ಟೀಕೆ ಬಿಟ್ಟು ವಾಸ್ತವ ಒಪ್ಪಿಕೊಳ್ಳಲಿ
ಕಾಂಗ್ರೆಸ್‌ ಸೋಲಿಗೆ ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಸೋಲಿನ ಬಗ್ಗೆ ಪರಾಮರ್ಶೆ ಮಾಡಲು ನಮಗೆ ಆಸಕ್ತಿಯಿಲ್ಲ. ಆದರೂ ಒಂದು ರಾಷ್ಟ್ರೀಯ ಪಕ್ಷವಾಗಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ‌ರು ಬಿಜೆಪಿ, ಸಿಎಂ ಬಿಎಸ್‌ವೈ ಮತ್ತು ಪ್ರಧಾನಿ ಮೋದಿ ಅವರನ್ನು ಎಷ್ಟೇ ಟೀಕೆ ಮಾಡಿದರೂ ಮತದಾರರು ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಮುಂದಾದರೂ ಅವರು ಅನಗತ್ಯ ಟೀಕೆಯನ್ನು ಬಿಟ್ಟು, ವಾಸ್ತವವನ್ನು ಒಪ್ಪಿಕೊಂಡು ಹೋರಾಟ ನಡೆಸಲಿ ಎಂದು ಹೇಳಿದರು.

ಬಿಜೆಪಿ ಭರ್ಜರಿ ಜಯಕ್ಕೆ ವೇದಿಕೆ ಸಿದ್ಧ
ಅನರ್ಹ ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಸನ್ನದ್ಧರಾಗಿದ್ದಾರೆ. ಉಪ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯದ್ದಾಗಿದೆ. ನಾವು ಹದಿನೈದು ಸ್ಥಾನಗಳನ್ನೂ ಗೆದ್ದು ಅಚ್ಚರಿಯ ಗೆಲುವು ದಾಖಲಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next