ಮಹಾನಗರ: ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಬಿಜೆಪಿ ಆಡಳಿತ ಸೂತ್ರ ಕೈಹಿಡಿಯಲು ಸನ್ನದ್ಧವಾಗಿದೆ. ಈಗ ಮುಂದಿನ ಮೇಯರ್, ಉಪ ಮೇಯರ್ ಆಯ್ಕೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಮೇಯರ್, ಉಪಮೇಯರ್ ಮೀಸಲಾತಿ ಈಗಾಗಲೇ ಸರಕಾರ ಪ್ರಕಟಿಸಿದ್ದು, ಹಾಗಾಗಿ ಅದಕ್ಕಾಗಿ ಕಾದು ಕಾಲ ಹರಣ ಮಾಡುವ ಪ್ರಮೇಯವಿಲ್ಲ. ಮುಂದಿನ 2- 3 ವಾರಗಳೊಳಗೆ ಮೇಯರ್, ಉಪ ಮೇಯರ್ ಆಯ್ಕೆ ನಡೆಯಲಿದೆ. ಒಂದೊಮ್ಮೆ ಸರಕಾರ ಮೀಸಲಾತಿಯನ್ನು ಬದಲಾಯಿಸಿದರೆ ಮಾತ್ರ ಸ್ವಲ್ಪ ವಿಳಂಬ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ 2- 3 ದಿನಗಳಲ್ಲಿ ಪಕ್ಷದ ರಾಜ್ಯ, ಜಿಲ್ಲಾ ಅಧ್ಯಕ್ಷರ ಹಾಗೂ ಪ್ರಮುಖರ ಸಭೆ ಕರೆದು ಚರ್ಚಿಸಿ ಮೇಯರ್, ಉಪ ಮೇಯರ್ ಆಯ್ಕೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮೇಯರ್, ಉಪಮೇಯರ್ ಸ್ಥಾನಗಳ ಮೀಸಲಾತಿಯನ್ನು ಈ ಹಿಂದೆಯೇ ಪ್ರಕಟಿಸಿದ್ದು, ಅದನ್ನು ಇದೀಗ ಮತ್ತೆ ಬದಲಾಯಿಸುವ ಬಗ್ಗೆ ಈ ತನಕ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ “ಸುದಿನ’ಕ್ಕೆ ತಿಳಿಸಿದ್ದಾರೆ.
ಚುನಾವಣ ಪ್ರಕ್ರಿಯೆ ಮುಕ್ತಾಯವಾಗಿ ಫಲಿತಾಂಶ ಘೋಷಣೆಯಾದ ಕುರಿತಂತೆ ಅಧಿಕೃತವಾಗಿ ಪತ್ರವನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಬರೆಯಲಾಗುವುದು. ಪ್ರಾದೇಶಿಕ ಆಯುಕ್ತರು ಮೇಯರ್, ಉಪ ಮೇಯರ್ ಚುನಾವಣೆಗೆ ಸಂಬಂಧಿಸಿ ದಿನಾಂಕವನ್ನು ನಿಗದಿ ಪಡಿಸಿ ಪಾಲಿಕೆ ಪತ್ರ ಬರೆಯುತ್ತಾರೆ. ಅವರು (ಪ್ರಾದೇಶಿಕ ಆಯುಕ್ತರು) ನಿಗದಿ ಪಡಿಸಿದ ದಿನಾಂಕದ ಬಗ್ಗೆ ಎಲ್ಲ ಚುನಾಯಿತ ಸದಸ್ಯರಿಗೆ ಮಾಹಿತಿ ನೀಡಲಾಗುತ್ತದೆ. ನಿಗದಿ ಪಡಿಸುವ ದಿನಾಂಕದಂದು ಪಾಲಿಕೆಯ ಪರಿಷತ್‌ನ ಪ್ರಥಮ ಸಭೆ, ಮೇಯರ್ ಚುನಾವಣೆ ನಡೆಸಲಾಗುತ್ತದೆ ಎಂದು ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಮೇಯರ್, ಉಪ ಮೇಯರ್ ಆಯ್ಕೆಯನ್ನು ಇಂತಿಷ್ಟೇ ದಿನಗಳಲ್ಲಿ ಮಾಡ ಬೇಕೆಂಬ ನಿರ್ದಿಷ್ಟ ನಿಯಮಗಳೇನೂ ಇಲ್ಲ. ಆದರೆ ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ಬಳಿಕ 15- 20 ದಿನಗಳಲ್ಲಿ ಮೇಯರ್ ಆಯ್ಕೆ ನಡೆಯುತ್ತದೆ. ಮೇಯರ್, ಉಪ ಮೇಯರ್ ಮೀಸಲಾತಿಯನ್ನು ಸರಕಾರ ಪರಿಷ್ಕರಣೆ ಮಾಡಲು ಮುಂದಾಗದಿದ್ದರೆ ಮುಂದಿನ 2- 3 ವಾರಗಳಲ್ಲಿ ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇಂದು ಅಭಿನಂದನ ಸಭೆ
ಪಾಲಿಕೆಯ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಭೆ ಮತ್ತು ವಿಜಯೋತ್ಸವ ನಗರದ ಕದ್ರಿ ಮೈದಾನಿನಲ್ಲಿ ನ. 16ರಂದು ಸಂಜೆ 5.30ಕ್ಕೆ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಮತ್ತು ಡಾ| ಭರತ್ ಶೆಟ್ಟಿ ವೈ. ಅವರ ನೇತೃತ್ವದಲ್ಲಿ ನಡೆಯಲಿದೆ.
ಉತ್ತಮ ಆಡಳಿತ ನೀಡುತ್ತೇವೆ
ಪಾಲಿಕೆಗೆ ಆಯ್ಕೆಯಾದ 44 ಮಂದಿ ಸದಸ್ಯರಲ್ಲಿ ಸಾಕಷ್ಟು ಮಂದಿ ಹಿರಿಯರು ಮತ್ತು ಅನುಭವಿಗಳು ಇದ್ದು, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇವೆ.
- ಡಿ. ವೇದವ್ಯಾಸ ಕಾಮತ್, ಶಾಸಕರು