ಮಂಗಳೂರು: ಸ್ಟೇಟ್‌ಬ್ಯಾಂಕ್-ಮಣಿಪಾಲ ಮಧ್ಯೆ ಪ್ರತೀ ಅರ್ಧ ತಾಸಿಗೊಮ್ಮೆ ಸಂಚರಿಸುವ ಕೆಎಸ್ಸಾರ್ಟಿಸಿ ಕೆಂಪು ವೋಲ್ವೋ ಬಸ್‌ಗಳ ಪೈಕಿ ಕೆಲವು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು, ಪರ್ಯಾಯವಾಗಿ ಬೇರೆ ಬಸ್‌ಗಳನ್ನು ನೀಡುವಂತೆ ಕೆಎಸ್ಸಾರ್ಟಿಸಿ ಮಂಗಳೂರು ಕಚೇರಿಯಿಂದ ಬೆಂಗಳೂರು ಕೇಂದ್ರ ಕಚೇರಿಯನ್ನು ಕೋರಲಾಗಿದೆ.
ಮಂಗಳೂರು- ಉಡುಪಿ- ಮಣಿಪಾಲ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ವೋಲ್ವೊ ಬಸ್ ಸಂಚಾರ ಆರಂಭವಾಗಿ ಕೆಲವು ವರ್ಷಗಳಾಗಿವೆ. ಪ್ರತೀ ಅರ್ಧ ತಾಸಿಗೊಮ್ಮೆ ಇವು ಸಂಚರಿಸುತ್ತಿವೆ. ಆದರೆ ಇವು ಹಳೆಯದಾಗಿ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿವೆ.
ಕೆಲವು ಬಸ್‌ಗಳಲ್ಲಿ ಏಸಿ ಸರಿ ಇಲ್ಲ; ಮಳೆ ನೀರು ಸೋರುವ ಬಸ್‌ಗಳಿವೆ, ಆಸನವೂ ಸರಿಯಿಲ್ಲ ಇತ್ಯಾದಿ ಹಲವು ದೂರುಗಳು ಪ್ರಯಾಣಿಕರಿಂದ ವ್ಯಕ್ತವಾಗುತ್ತಿವೆ. ತಾಂತ್ರಿಕ ಸಮಸ್ಯೆಗಳಿಂದ ಕೆಲವೊಮ್ಮೆ ಸಂಚಾರವನ್ನು ಮೊಟಕುಗೊಳಿಸಲಾಗುತ್ತದೆ. ಹೀಗಾಗಿ ಪ್ರಯಾಣಿ ಕರಿಗೆ ಸಮಸ್ಯೆ ಆಗುತ್ತಿದ್ದು, ಈ ಬಗ್ಗೆ ಮಂಗಳೂರು ಕಚೇರಿಗೆ ದೂರು ನೀಡಿದ್ದಾರೆ. ಹೀಗಾಗಿ ವಿಚಾರವನ್ನು ಕೇಂದ್ರ ಕಚೇರಿಯ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ.
“ಉದಯವಾಣಿ’ ಜತೆಗೆ ಮಾತನಾಡಿದ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರ ಣಾಧಿಕಾರಿ ಕೆ.ಎಂ ಅಶ್ರಫ್, ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಅಂಶ ಗಮನಕ್ಕೆ ಬಂದಿದೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸದ್ಯ ಹೊಸ ಕೆಂಪು ಬಣ್ಣದ ಸಿಟಿ ವೋಲ್ವೋ ಆಗಮಿಸುವ ಸಾಧ್ಯತೆ ಇಲ್ಲ. ಆದರೆ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದ್ದರೆ ಮಂಗಳೂರು-ಭಟ್ಕಳ ವೋಲ್ವೋ ಬಸ್‌ಗಳಂತೆ ಈ ರೂಟ್‌ನಲ್ಲಿಯೂ ಬೇರೆ ವೋಲ್ವೋ ಬಸ್‌ಗಳನ್ನು ಓಡಿಸಲಾಗುವುದು ಎಂದಿದ್ದಾರೆ.