ಮಂಗಳೂರು: ರಾಜ್ಯ ಚುನಾವಣ ಆಯೋಗವು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ದ.ಕ. ಜಿಲ್ಲಾಧಿಕಾರಿಯವರನ್ನು ಕೋರಿದ್ದು, ಪಾಲಿಕೆ ಚುನಾವಣೆಗೆ ಪೂರ್ವಸಿದ್ಧತೆ ಆರಂಭಗೊಂಡಿದೆ.
ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ ಮತ್ತು 2019ರ ಡಿಸೆಂಬರ್‌ನಲ್ಲಿ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ ರಾಜ್ಯ ಚುನಾವಣ ಆಯೋಗ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಕೋರಿದೆ.
ಮತದಾನ ಪಟ್ಟಿ, ಮತದಾನ ಕೇಂದ್ರಗಳ ಪಟ್ಟಿ ಸಿದ್ಧಪಡಿಸುವುದು, ಮತದಾನ ಸಿಬಂದಿ ನೇಮಕ, ಇವಿಎಂ ಸಂಗ್ರಹ, ಚುನಾವಣಾಧಿಕಾರಿಗಳ ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಆಯೋಗ ತಿಳಿಸಿದೆ.
ಪಾಲಿಕೆಯ ಪ್ರತಿ 5 ವಾರ್ಡ್‌ಗೆ ಉಪವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಓರ್ವ ಅಧಿಕಾರಿಯನ್ನು ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಆಯೋಗ ಕೋರಿದೆ.
ಪಾಲಿಕೆಯಲ್ಲಿ ಮೀಸಲಾತಿ ವಿವಾದವನ್ನು ನ್ಯಾಯಾಲಯ ಬಗೆಹರಿಸಿದ್ದು, ಅಕ್ಟೋಬರ್ ತಿಂಗಳೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಮನಪಾ ಒಟ್ಟು 60 ವಾರ್ಡ್‌ಗಳನ್ನು ಒಳಗೊಂಡಿದೆ.