Advertisement

Literature: ಇಂದಿನಿಂದ ಮಂಗಳೂರು ಲಿಟ್‌ ಫೆಸ್ಟ್‌

01:11 AM Jan 19, 2024 | Team Udayavani |

ಮಂಗಳೂರು: ಭಾರತ್‌ ಫೌಂಡೇಶನ್‌ ವತಿಯಿಂದ ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ “ಮಂಗಳೂರು ಲಿಟ್‌ ಫೆಸ್ಟ್‌’ನ ಆರನೇ ಆವೃತ್ತಿ ಜ. 19, 20 ಮತ್ತು 21ರಂದು ಇಲ್ಲಿನ ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದೆ. 29 ಕಲಾಪಗಳನ್ನೊಳಗೊಂಡ ವಿಚಾರ ಸಂಕಿರಣದಲ್ಲಿ 60ಕ್ಕೂ ಅಧಿಕ ಮಂದಿ ಸಾಹಿತಿ, ವಾಗ್ಮಿಗಳು ಭಾಗವಹಿಸಲಿದ್ದಾರೆ ಎಂದು ಭಾರತ್‌ ಫೌಂಡೇಶನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಜ. 19ರಂದು ಸಂಜೆ 5ಕ್ಕೆ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಕಲಾವಿದೆ ರಾಧೆ ಜಗ್ಗಿ, ನಿಟ್ಟೆ ವಿ.ವಿ.ಯ ವಿನಯ ಹೆಗ್ಡೆ, ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿ ರವಿ ಮತ್ತು ವನಿತಾ ಸೇವಾ ಸಮಾಜ ಧಾರವಾಡದ ಕಾರ್ಯದರ್ಶಿ ಮಧುರಾ ಹೆಗಡೆ, ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಸಂಸ್ಥೆ (ಐಸಿಎಸ್‌ಎಸ್‌ಆರ್‌) ಸದಸ್ಯ ಕಾರ್ಯದರ್ಶಿ ಡಾ| ಧನಂಜಯ ಸಿಂಗ್‌, ರಕ್ಷಣಾ ಸಚಿವರ ಸಲಹೆಗಾರ ಲೆ| ಜ| ವಿನೋದ ಖಂಡಾರೆ ಭಾಗವಹಿಸಲಿದ್ದಾರೆ ಎಂದರು.

ವನಿತಾ ಸೇವಾ ಸಮಾಜಕ್ಕೆ ಪ್ರಶಸ್ತಿ
ಈ ಬಾರಿಯ “ದಿ ಐಡಿಯಾ ಆಫ್‌ ಭಾರತ್‌’ ಪ್ರಶಸ್ತಿಗೆ ವನಿತಾ ಸೇವಾ ಸಮಾಜ ಧಾರವಾಡ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಭರತನಾಟ್ಯ ಕಲಾವಿದೆ ರಾಧೆ ಜಗ್ಗಿ (ಜ. 19) ಮತ್ತು ಶಾಸ್ತ್ರೀಯ ಸಂಗೀತ ಕಲಾವಿದ ಸಂದೀಪ್‌ ನಾರಾಯಣ್‌ (ಜ. 20) ಅವರಿಂದ ಸಂಜೆ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ಪ್ರದರ್ಶನ, ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ಚಿಣ್ಣರ ಅಂಗಳ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಕ್ಲೇ ಮಾಡಲಿಂಗ್‌, ದೇಸಿ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ (ಹರಟೆ ಕಟ್ಟೆ) ಈ ಬಾರಿಯ ಲಿಟ್‌ ಫೆಸ್ಟ್‌ನ ವಿಶೇಷತೆ ಎಂದು ಶ್ರೀರಾಜ್‌ ಗುಡಿ ಮಾಹಿತಿ ನೀಡಿದರು.

ಜ. 20 ಮತ್ತು 21ರಂದು ವಿವಿಧ ಗೋಷ್ಠಿಗಳು ನಡೆಯಲಿವೆ. ಕಾರ್ಯಕ್ರಮಗಳ ವಿವರಗಳನ್ನು https://mlrlitfest.org/event-schedule-2024/ ಲಿಂಕ್‌ನಲ್ಲಿ ನೋಡಬಹುದು ಎಂದರು.

ಆಯೋಜಕರಾದ ದುರ್ಗಾ ಪ್ರಸಾದ್‌ ಕಟೀಲು, ಸುಜಿತ್‌ ಪ್ರತಾಪ್‌, ಈಶ್ವರ್‌ ಶೆಟ್ಟಿ, ದಿಶಾ ಶೆಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next