Advertisement

ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

01:41 PM Jan 25, 2018 | Team Udayavani |

ಸುರತ್ಕಲ್‌ : ಕನ್ನಡ ಮನಸ್ಸುಗಳನ್ನು ಜಾಗೃತಗೊಳಿಸುವ ಕಾರ್ಯ ನಡೆಯಬೇಕಾಗಿದ್ದು, ಸಮ್ಮೇಳನಗಳು ಅಂತಃರ್ಗತವಾದ ಕನ್ನಡ ಪ್ರೇಮಕ್ಕೆ ಮೂರ್ತ ರೂಪವನ್ನು ತರುತ್ತವೆ ಎಂದು ಹಿರಿಯ ಸಾಹಿತಿ ವಾಮನ ಇಡ್ಯಾ ನುಡಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಮಂಗಳೂರು ತಾಲೂಕು ಘಟಕ ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.

ಪದವಿ ಕಾಲೇಜುಗಳಲ್ಲಿ ಕನ್ನಡ ವಿಷಯ ಅಧ್ಯಯನ ಅವಕಾಶ ಸರ್ವರಿಗೂ ಸಿಗುವಲ್ಲಿ ಸರಕಾರ ವಿಶೇಷ ಬೆಂಬಲ ನೀಡಬೇಕಾಗಿದೆ. ಕನ್ನಡದ ಕುರಿತಂತೆ ವಿದ್ಯಾರ್ಥಿಗಳಲ್ಲಿರುವ ಆಸಕ್ತಿಯನ್ನು ಪ್ರೋತ್ಸಾಹಿಸುವಲ್ಲಿ ಸಾಹಿತ್ಯಾಸಕ್ತರು ಚಿಂತಿಸ ಬೇಕಾಗಿದೆ ಎಂದರು.

ಪರೀಕ್ಷಾ ಗುರಿ ಮಾತ್ರ ಶಿಕ್ಷಣ
ಶಾಲೆಗಳಲ್ಲಿ ಶೈಕ್ಷಣಿಕ ಬೋಧನ ವಿಷಯಗಳಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಮನ ಗೆಲ್ಲಲು ಇತ್ತೀಚಿನ ದಿನಗಳಲ್ಲಿ ಕಷ್ಟವಾಗುತ್ತಿದೆ ಮಾತ್ರವಲ್ಲ ಟಿಪ್ಪಣಿ ಓದಿ ಅರ್ಥ ಬರೆಯಿರಿ ಎನ್ನುವ ಮಟ್ಟಕ್ಕೆ ಬೋಧನೆ ತಲುಪಿದೆ. ಪರೀಕ್ಷಾ ಗುರಿ ಮಾತ್ರ ಶಿಕ್ಷಣ ಎಂಬಂತಾಗಿದೆ ಎಂದು ಹೇಳಿದರು.

ಸಾಧಕರ ನಡೆ ಆದರ್ಶ
ಹಿರಿಯ ಸಾಧಕರನ್ನು ಸಮ್ಮಾನಿಸಿದ ಜೋತಿಷಿ ಕೆ.ಸಿ. ನಾಗೇಂದ್ರ ಭಾರದ್ವಾಜ್‌ ಅವರು ಹಿರಿಯ ಸಾಧಕರ ನಡೆ
ನಮ್ಮೆಲ್ಲರಿಗೂ ಆದರ್ಶ ಮಾದರಿಯಾಗಿದ್ದು, ಅವರು ನಿರ್ಮಿಸಿದ ಸುಪಥದಲ್ಲಿ ಮುನ್ನಡೆಯ ಬೇಕಾಗಿದೆ ಎಂದರು.

Advertisement

ಯಾಜಿ ಡಾ| ನಿರಂಜನ್‌ ಭಟ್‌, ಎಚ್‌.ಯು. ಅನಂತಯ್ಯ, ಪ್ರೊ| ಗಿರಿಧರ ಹತ್ವಾರ್‌, ಟಿ.ಕೆ. ಹುಸೇನ್‌, ಜಾನ್‌ ಕೆನಡಿ,
ಶಂಕರ್‌ ಶೆಟ್ಟಿ, ಸುವಾಸಿನಿ ಬಬ್ಬುಕಟ್ಟೆ, ಜೆನ್ನಿ ಬಾಯಿ ಬೆಂಗರೆ, ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನಿತರ ಪರವಾಗಿ ಮಾತನಾಡಿದ ಪ್ರೊ| ಗಿರಿಧರ ಹತ್ವಾರ್‌ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಮಾನವೀಯ ಸಮಾಜ ರೂಪುಗೊಳ್ಳುತ್ತದೆಂದು ಕೃತಜ್ಞತೆ ಸಲ್ಲಿಸಿದರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಮುರಳೀಧರ ರಾವ್‌ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕನ್ನಡ ಸಾಹಿತ್ಯಾಭಿರುಚಿಯ ವರ್ಧನೆಗೆ ಶ್ರಮಿಸುತ್ತವೆಂದರು.

ಸಮಾನ ಶಿಕ್ಷಣ ದೊರಯಲಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ಸರ್ವ ವಿದ್ಯಾರ್ಥಿಗಳಿಗೂ ಸಮಾನವಾಗಿ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಬೇಕಾಗಿದೆ ಎಂದರು. ಮಂಗಳೂರು ತಾಲೂಕು ಕಸಾಪ ಗೌರವ ಕೋಶಾಧಿ ಕಾರಿ ಪ್ರೊ| ಪಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಕಸಾಪ ಸುರತ್ಕಲ್‌ ಹೋಬಳಿ ಅಧ್ಯಕ್ಷ ವಿನಯ ಆಚಾರ್‌ ವಂದಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಡಾ| ಪದ್ಮನಾಭ ಭಟ್‌ ಎಕ್ಕಾರು ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕಾರ್ಯದರ್ಶಿ ದೇವಕಿ ಅಚ್ಯುತ ಮೊದಲಾದವರು ಉಪಸ್ಥಿತರಿದ್ದರು.

ಸಾಮರಸ್ಯದ ನಾಡು ಕಟ್ಟಬೇಕು
ಸಮ್ಮೇಳನಾಧ್ಯಕ್ಷ ಪ್ರೊ| ಎಚ್‌. ರಮೇಶ ಕೆದಿಲಾಯ ಅವರು ಮಾತನಾಡಿ, ಮಾನವೀಯ ಸ್ಪಂದನ ಸಾಹಿತ್ಯಾಧ್ಯಯನದಿಂದ ದೊರೆಯುತ್ತಿದ್ದು, ಸೌಹಾರ್ದ ಸಾಮರಸ್ಯದ ನಾಡು ಕಟ್ಟಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ| ಎಚ್‌. ರಮೇಶ ಕೆದಿಲಾಯರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next