Advertisement

ಜನನುಡಿ ಸಮ್ಮೇಳನ: ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ ಕವಿಗೋಷ್ಠಿ 

11:17 AM Dec 03, 2018 | |

ಮಹಾನಗರ: ಅಭಿಮತ ಮಂಗಳೂರು ವತಿಯಿಂದ ನಗರದ ಬಜೊjàಡಿಯ ಶಾಂತಿಕಿರಣ್‌ ಸಭಾಂಗಣದಲ್ಲಿ ‘ಜನ ನುಡಿ’ ಸಮ್ಮೇಳನದ 2ನೇ ದಿನ ಕವಿಗೋಷ್ಠಿ ನಡೆಯಿತು. ಹಿರಿಯ ಕವಿ ಚಿದಂಬರ ನರೇಂದ್ರ ಅವರು ಕವಿಗೋಷ್ಠಿಗೆ ಚಾಲನೆ ನೀಡಿ ಗುಲ್ಜಾರ್‌ ಮತ್ತು ಮಾಂಟೋ ಅವರ ಕವನಗಳನ್ನು ವಾಚಿಸಿದರು. ತಮ್ಮ ಕವನ ‘ಬಂಚ್‌ ಆಫ್‌ ಥಾಟ್ಸ್‌’ ವಾಚಿಸಿ ‘ರಸ್ತೆಯಲ್ಲಿ ಹೊಸ ಬಟ್ಟೆ ಹಾಕಿಕೊಂಡ ಕೆಲಸದವಳ ಕಂಡಾಗ ನಮಗೆ ನಮ್ಮ ಮನೆಯಲ್ಲಿ ಕಳೆದುಕೊಂಡ ದುಡ್ಡಿನ ನೆನಪಾಗುತ್ತದೆ’ ಎಂದು ಸರಣಿ ಅನುಭವಗಳನ್ನು ವಿವರಿಸಿದರು.

Advertisement

ಜ್ಯೋತಿ ಹಿಟ್ನಾಳ್‌ ಅವರು ‘ಜೀವವಿಲ್ಲದ ಗೋಡೆಗಳ ಮಧ್ಯೆ’ ಕವನ ವಾಚಿಸಿ, ‘ಈ ಪಲ್ಲಂಗದಲ್ಲಿ ಅತ್ತವರೆಷ್ಟೋ, ನಕ್ಕವರೆಷ್ಟೋ, ನೊಂದವರೆಷ್ಟೋ, ಬೆಂದವರೆಷ್ಟೋ, ಕಿರುಚಿದವರೆಷ್ಟೋ, ಹೆತ್ತವರೆಷ್ಟೊ, ಕೊನೆಗೆ ಕೊನೆ ಉಸಿರು ಬಿಟ್ಟವರೆಷ್ಟೋ’ಎನ್ನುತ್ತಾ ವೇಶ್ಯೆಯ ಬದುಕನ್ನು ಮುಂದಿಟ್ಟರು.

ಸುನೈಫ್‌ ವಿಟ್ಲ ಅವರು ‘ಜೀವಂತ ಮನುಷ್ಯರ ಶ್ಮಶಾನ’ ಕವನ ವಾಚಿಸಿ, ‘ಈ ಊರು ಜೀವಂತ ಮನುಷ್ಯರ ಶ್ಮಶಾನ, ಇಲ್ಲಿ ಶವ ತಿನ್ನುವ ಪಾರಿವಾಳಗಳಿವೆ’ ಎನ್ನುತ್ತಾ ಊರೊಂದರ ಚಿತ್ರಣ ಮುಂದಿಟ್ಟರು. ಹಾರೊಹಳ್ಳಿ ರವೀಂದ್ರ ಅವರು ‘ಹರಾಜಿಗಿಟ್ಟಿದ್ದೇವೆ’ ಕವನ ವಾಚಿಸಿ, ‘ಗಲ್ಲಿಗೊಂದು ಪೀಠ ಕಟ್ಟಿ, ಪೀಠಕೊಂದು ಗೂಟ ಕಟ್ಟಿ, ಗೂಟವನ್ನೇ ಮೇಟಿ ಮಾಡಿ, ಮೇಟಿ ಹೇಳಿದಂತೆ ನಾವು ಕೂಗುತ್ತಿದ್ದೇವೆ, ಕ್ಷಮಿಸಿ ನಾವು ನಿಮ್ಮನ್ನು ಹರಾಜಿಗಿಟ್ಟಿದ್ದೇವೆ’ ಎನ್ನುತ್ತಾ ವ್ಯರ್ಥ ಕಸರತ್ತುಗಳತ್ತ ಬೆಳಕು ಚೆಲ್ಲಿದರು.

ವಿಲ್ಸನ್‌ ಕಟೀಲು ಅವರು ‘ಸಾರ್ವಜನಿಕರಿಗೆ ಕೆಲವು ಸೂಚನೆಗಳು’ ಕವನ ವಾಚಿಸಿ, ‘ಸವಾರಿಗೆ ಹೊರಡುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ, ಇಲ್ಲಿ ಬದುಕುಳಿಯಲು ಬರೀ ತಲೆ ಇದ್ದರಷ್ಟೇ ಸಾಲದು. ಶಾಲಾ ಕಾಲೇಜುಗಳ ಆಸುಪಾಸು ತಂಬಾಕು ಮಾರಬೇಡಿ, ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಅಫೀಮು ಪಠ್ಯ ಪುಸ್ತಕದಲ್ಲಿಯೇ ಲಭ್ಯವಿದೆ’ ಎಂದು ವಿಡಂಬನಾತ್ಮಕವಾಗಿ ಪ್ರಸ್ತುತ ಸಾಮಾಜಿಕ ಚಿತ್ರಣ ಮುಂದಿಟ್ಟರು. ‘ಚುನಾವಣೆ ವೇಳೆ ಎರಡೆರಡು ಚಿಹ್ನೆಗಳಿಗೆ ಮತ ಹಾಕಬೇಡಿ, ದೇಶವನ್ನು ಕೊಳ್ಳೆ ಹೊಡೆಯಲು ಒಂದೇ ಪಕ್ಷ ಸಾಕು’ ಎಂದರು.

ರುಕ್ಮಿಣಿ ನಾಗಣ್ಣನವರ್‌ ಅವರು ‘ಸಿರಿಯ ಕಂದಮ್ಮಗಳೇ ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ’ ಕವನ ವಾಚಿಸಿದರು. ಶೇಖರ್‌ ನಾಯ್ಕ ಕನಕಗಿರಿ ಅವರು ‘ಹೆಣದ ಮೇಲಿನ ನೊಣ’ ಕವನ ವಾಚಿಸಿ ಕೋಮು ದಳ್ಳುರಿಯ ಬೀಭತ್ಸತೆ ಮುಂದಿಟ್ಟರು. ಪಿ.ಕೆ. ನವಲಗುಂದ ಧಾರವಾಡ ಅವರು ‘ಮೇಡ್‌ ಇನ್‌ ಚೀನಾ’ ಕವನ ವಾಚಿಸಿದರು. ಭುವನ ಹಿರೇಮಠ ಅವರು ‘ಮಿನಿಯನ್‌ ಡಾಲರ್‌ ಮುಗುಳ್ನಗೆ’ ಕವನ ವಾಚಿಸಿದರು. ರಾಜಪ್ಪ ಭರಮಸಾಗರ ಅವರು ‘ಜಾತಿ ಸಂಘರ್ಷ’ ಕವನ ವಾಚಿಸಿದರು. ಸಹ್ಯಾದ್ರಿ ನಾಗರಾಜ್‌ ಅವರು ‘ಹೂವೆಂಬುದು ಮಣ್ಣೊಳಗಿನ ಬೆಳಕು’ ಕವನ ವಾಚಿಸಿದರು.

Advertisement

ಸಂದೀಪ್‌ ಈಶಾನ್ಯ ಅವರು ‘ಒಂದು ಹಳೆಯ ರೇಡಿಯೋ ಹಾಡು’ ಕವನ ವಾಚಿಸಿದರು. ಬ್ಯಾರಿ ಭಾಷೆಯಲ್ಲಿ ಮಹಮ್ಮದ್‌ ಬಡ್ಡೂರು ಅವರು ಕವನ ವಾಚಿಸಿ ತಾವೇ ಅರ್ಥವನ್ನು ಕನ್ನಡದಲ್ಲಿ ಹೇಳಿದರು. ‘ಕೋಮು ನಶೆಗೆ ಸುಳ್ಳಲ್ಲದೇ ಬೇರೇನೂ ತಿಳಿದಿಲ್ಲ’ ಎಂದರು.

ಕೊಂಕಣಿ ಭಾಷೆಯಲ್ಲಿ ಫೆಲ್ಸಿ ಲೋಬೋ ಅವರು ‘ತುಮ್ಚೆಂ  ದೇವ್‌ ಖಂಯ್‌ ಅಸಾತ್‌’ ಕವನ ವಾಚಿಸಿದರು. ಶ್ರೀಹರಿ ದೂಪದ ಬಾಗಲಕೋಟೆ ಅವರು ಅವರು ಜನನುಡಿಯ ಘೋಷವಾಕ್ಯ ‘ನುಡಿಯು ಸಿರಿಯಲ್ಲ ಬದುಕು’ ಎಂಬ ಶೀರ್ಷಿಕೆಯನ್ನಾಗಿಟ್ಟುಕೊಂಡು ಕವನ ವಾಚಿಸಿದರು. ದುರುಗೇಶ್‌ ಪೂಜಾರ್‌ ಹರಪನಹಳ್ಳಿ ಅವರು ಕರಾವಳಿಯಲ್ಲಿ ಕೋಮುದಳ್ಳುರಿಗೆ ಬಲಿಯಾದ ದೀಪು ಹಾಗೂ ಬಷೀರ್‌ ಅವರಿಗೆ ತಮ್ಮ ‘ಕರಾವಳಿಯ ಕರಾಳ’ ಕವನ ಅರ್ಪಿಸಿ ವಾಚಿಸಿದರು.

ವೀರೇಶ್‌ ನಾಯ್ಕ ಗದಗ ಅವರು ‘ದೇವರಿಗೊಂದು ಪತ್ರ’ ಕವನ ವಾಚಿಸಿದರು. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಮಾಲೂರು ಅವರು ‘ಟೇಕಲ್ಲಿನ ಬಂಡೆಗಳು ಮತ್ತು ಕಡಲು’ ಕವನ ವಾಚಿಸಿದರು. ಚಾಂದ್‌ ಪಾಶಾ ಬೆಂಗಳೂರು ಅವರು ‘ಮಸೀದಿಯೊಳಗೊಂದು ಹೆಣ್ಣು ದೀಪ’ ಕವನ ವಾಚಿಸಿದರು. ಕವಿಗೋಷ್ಠಿಯನ್ನು ಸಚಿತ ರೈ ಪೆರ್ಲ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next