Advertisement

ಅಯೋಧ್ಯೆಯಲ್ಲಿ  ಶ್ರೀ ರಾಮ ಮಂದಿರ ನಿರ್ಮಾಣಕ್ಕೆ  ಜನಾಗ್ರಹ

09:49 AM Nov 26, 2018 | |

ಮಹಾನಗರ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಒತ್ತಾಯದೊಂದಿಗೆ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಬೃಹತ್‌ ಜನಾಗ್ರಹ ಸಭೆ ರವಿವಾರ ಮಂಗಳೂರಿನ ಕೇಂದ್ರ ಮೈದಾನ ದಲ್ಲಿ ನಡೆಯುವ ಮೂಲಕ ಸಾವಿರಾರು ಜನರ ಸಂಗಮಕ್ಕೆ ಸಾಕ್ಷಿಯಾಯಿತು.

Advertisement

ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರು ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಸಂಸತ್‌ ನಲ್ಲಿ ಮಸೂದೆ ಮಂಡಿಸಬೇಕು’ ಎಂದು ಆಗ್ರಹಿಸಿದರು. ಸಮಾವೇಶಕ್ಕೂ ಮುನ್ನ ಬೃಹತ್‌ ಶೋಭಾಯಾತ್ರೆ ಜ್ಯೋತಿಯ ಅಂಬೇಡ್ಕರ್‌ ಸರ್ಕಲ್‌ನಿಂದ ಕೇಂದ್ರ ಮೈದಾನದವರೆಗೆ ಸಾಗಿಬಂತು.

ಮಧ್ಯಾಹ್ನ 3.30ಕ್ಕೆ ಮೆರವಣಿಗೆ ಅಂಬೇಡ್ಕರ್‌ ಸರ್ಕಲ್‌ನಿಂದ ಆರಂಭಗೊಂಡು 4 ಗಂಟೆಗೆ ಹಂಪನಕಟ್ಟೆ ತಲುಪಿತ್ತು. 4.30ರ ಸುಮಾರಿಗೆ ಮೈದಾನಕ್ಕೆ ಮೆರವಣಿಗೆ ತಲುಪಿತ್ತು. ಸಭಾ ಕಾರ್ಯಕ್ರಮ ಆರಂಭವಾದ ಅನಂತರವೂ ಮೆರವಣಿಗೆ ಬರುತ್ತಲೇ ಇತ್ತು. ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿಬಂದರು.

ಮೆರವಣಿಗೆ ಸಾಗಿಬರುವ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ದೃಶ್ಯಕಂಡುಬಂತು. ಮೆರವಣಿಗೆ ಸಾಗಿಬಂದ ಹಾದಿ ಪೂರ್ಣ ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ’ ಸಂಬಂಧಿತ ಒಕ್ಕಣೆಯ ಬರಹಗಳ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ, ಆರ್‌ಎಸ್‌ಎಸ್‌ನ ಹಿರಿಯ ನಾಯಕರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮೆರವಣಿಗೆಯಲ್ಲಿದ್ದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ಎನ್‌.ಯೋಗೀಶ್‌ ಭಟ್‌, ರುಕ್ಮಯ್ಯ ಪೂಜಾರಿ, ಜಗದೀಶ ಶೇಣವ, ಶರಣ್‌ ಪಂಪ್‌ವೆಲ್‌ ಸೇರಿದಂತೆ ಹಲವು ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

ಕ್ರಿಕೆಟ್‌ ಗ್ರೌಂಡ್‌ನ‌ಲ್ಲೂ ಜನ
ನೆಹರೂ ಮೈದಾನದ ಫುಟ್‌ಬಾಲ್‌ ಮೈದಾನದಲ್ಲಿ ಜನಾಗ್ರಹ ಸಭೆ ಆಯೋಜಿಸಲಾಗಿತ್ತು. ಮೈದಾನದ ಎರಡೂ ಬದಿಯಲ್ಲಿ ಆಸನದ ವ್ಯವಸ್ಥೆ ಮಾಡಿದ್ದರೆ, ಮಧ್ಯಭಾಗದಲ್ಲಿ ಜನರು ನೆಲದಲ್ಲಿ ಕುಳಿತುಕೊಂಡಿದ್ದರು. ಮೈದಾನದ ಎರಡು ಪಾರ್ಶ್ವದ ಗ್ಯಾಲರಿಯಲ್ಲಿ ಸಾವಿರಾರು ಜನರು ಕುಳಿತಿದ್ದರು. ಇನ್ನೊಂದು ಪಾರ್ಶ್ವದಲ್ಲಿ ನಿಂತುಕೊಂಡೇ ಸಭೆ ವೀಕ್ಷಿಸಿದರು. ಈ ಮಧ್ಯೆ ಮೇಲಿನ ಕ್ರಿಕೆಟ್‌ ಸ್ಟೇಡಿಯಂನಲ್ಲೂ ಜನ ನೆರೆದಿದ್ದರು. ವಾಹನ ನಿಲುಗಡೆಗೆ ಇಲ್ಲಿ ಅವಕಾಶ ನೀಡಿದ್ದರೂ, ಬಹುತೇಕ ಜನ ಇಲ್ಲಿಯೇ ನಿಂತು ಕಾರ್ಯಕ್ರಮ ವೀಕ್ಷಿಸಿದರು. 

ವ್ಯವಸ್ಥಿತ ಪಾರ್ಕಿಂಗ್‌
ಸಭೆಯಲ್ಲಿ ಭಾಗವಹಿಸಿದ ಜನರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಮೂಡಬಿದಿರೆ, ಎಡಪದವು, ಕೈಕಂಬ, ಗುರುಪುರ, ವಾಮಂಜೂರು ಕಡೆಯಿಂದ ಬಂದ ವಾಹನಗಳು ನಂತೂರು ಮಲ್ಲಿಕಟ್ಟೆ ಮಾರ್ಗವಾಗಿ ಬಂಟ್ಸ್‌ಹಾಸ್ಟೆಲ್‌ನಲ್ಲಿ ಜನರನ್ನು ಇಳಿಸಿ, ಬಂಟ್ಸ್‌ಹಾಸ್ಟೆಲ್‌ ಮೈದಾನ ದಲ್ಲಿ ನಿಲುಗಡೆ ಮಾಡಲಾಗಿತ್ತು. ಮೂಲ್ಕಿ, ಸುರತ್ಕಲ್‌ ಕಡೆಯಿಂದ ಬಂದ ವಾಹನಗಳು ಕೂಳೂರು, ಕೊಟ್ಟಾರ, ಲೇಡಿಹಿಲ್‌, ಲಾಲ್‌ಬಾಗ್‌, ಪಿ.ವಿ.ಎಸ್‌. ಮಾರ್ಗವಾಗಿ ಬಂಟ್ಸ್‌ ಹಾಸ್ಟೆಲ್‌ನಲ್ಲಿ ಜನರನ್ನು ಇಳಿಸಿ, ಅಲ್ಲಿನ ಮೈದಾನದಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಜಪೆ, ಕಟೀಲು, ಕಿನ್ನಿಗೋಳಿ ಕಡೆಯಿಂದ ಬಂದ ವಾಹನಗಳು ಕಾವೂರು, ಯೆಯ್ನಾಡಿ ಮಾರ್ಗವಾಗಿ ನಂತೂರು, ಮಲ್ಲಿಕಟ್ಟೆ ಮೂಲಕ ಬಂದು ಬಂಟ್ಸ್‌ಹಾಸ್ಟೆಲ್‌ನಲ್ಲಿ ಜನರನ್ನು ಇಳಿಸಿ, ಕದ್ರಿ ಮೈದಾನದಲ್ಲಿ ನಿಲುಗಡೆ ಮಾಡಿದರು.

ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಬಂದ ವಾಹನಗಳು ಬಿ.ಸಿ.ರೋಡ್‌ ಮೂಲಕ ಬಂದು ಪಡೀಲ್‌, ಪಂಪ್‌ವೆಲ್‌, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಎಮ್ಮೆಕೆರೆ ಮೈದಾನದಲ್ಲಿ ನಿಲುಗಡೆ ಮಾಡಿದ ರು. ತೊಕ್ಕೊಟ್ಟು ಕಡೆಯಿಂದ ಬಂದ ವಾಹನಗಳು ಪಂಪ್‌ವೆಲ್‌, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಮಂಗಳಾದೇವಿ, ಪಾಂಡೇಶ್ವರ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಲಾಗಿತ್ತು. ಮಂಗಳೂರು ನಗರದಿಂದ ಬಂದ ಬಸ್ಸುಗಳು ಮತ್ತು ಚತುಶ್ಚಕ್ರ ವಾಹನಗಳನ್ನು ಸೈಂಟ್‌ ಅನ್ಸ್‌ ಮತ್ತು ರೊಜಾರಿಯೋ ಶಾಲೆಯ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಲಾಗಿತ್ತು. ದ್ವಿಚಕ್ರ ವಾಹನಗಳನ್ನು ಕೇಂದ್ರ ಮೈದಾನದ ಒಳಗಡೆ ಕ್ರಿಕೆಟ್‌ ಗ್ರೌಂಡಿನ ಎರಡು ಬದಿಯಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಲಾಯಿತು.

ಎಲ್ಲೆಲ್ಲೂ ಪೊಲೀಸ್‌ ಬಂದೋಬಸ್ತು 
ಸಮಾವೇಶದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗಿಬರುವ ಸಂದರ್ಭದಲ್ಲಿಯೂವ್ಯಾಪಕ ಪೊಲೀಸ್‌ ಭದ್ರತೆ ನೀಡಲಾಗಿತ್ತು. ಇಬ್ಬರು ಡಿಸಿಪಿ ಮತ್ತು 10 ಮಂದಿ ಎಸಿಪಿ ದರ್ಜೆಯ ಅಧಿಕಾರಿಗಳು, ಪೊಲೀಸ್‌ ಇನ್‌ಸ್ಪೆಕ್ಟರ್‌, ಪಿಎಸ್‌ಐ, ಸಿಬಂದಿ, ಕೆಎಸ್‌ಆರ್‌ಪಿ ಪ್ಲಟೂನ್‌, ಡಿಎಆರ್‌/ ಸಿಎಆರ್‌ ಪ್ಲಟೂನ್‌ ಹಾಗೂ ಹೊರ ಜಿಲ್ಲೆಗಳ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಭದ್ರತೆಯ ಉಸ್ತುವಾರಿ ನೋಡಿಕೊಂಡಿದ್ದರು. 

ಮೆರವಣಿಗೆಯ ಹೈಲೈಟ್ಸ್‌
. ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯಿಂದ 25,000 ಮಜ್ಜಿಗೆ ವ್ಯವಸ್ಥೆ.
. ಮೆರವಣಿಗೆ ಸಾಗುವಾಗ ಬೆಲ್ಲ-ನೀರು ವ್ಯವಸ್ಥೆ.
. ಮೆರವಣಿಗೆಯ ಜತೆಗೆ ಸ್ವಚ್ಛತೆಯ ತಂಡ -ಕಸ ವಿಲೇವಾರಿ.
. ಮಹಿಳೆಯರಿಂದ ಭಜನೆ.
. ವಿಹಿಂಪ ಧರ್ಮರಕ್ಷಾ ನಿಧಿ ಸಂಗ್ರಹ.
. ಚೆಂಡೆ, ನಾಸಿಕ್‌ ಬ್ಯಾಂಡ್‌ ಮೂಲಕ ಮೆರವಣಿಗೆಗೆ ಹೊಸ ರಂಗು.
. ರಾಮ ಲಕ್ಷ್ಮಣ-ಹನುಮಂತನ ಚಿತ್ರಗಳು ಮೆರವಣಿಗೆಯ ಹೈಲೈಟ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next