Advertisement

ದೇರೆಬೈಲ್‌ನಲ್ಲಿ ಸಿದ್ಧವಾಗಲಿದೆ “ಮಂಗಳೂರು ಐಟಿ ಪಾರ್ಕ್‌’

12:26 AM Jun 26, 2020 | Sriram |

ವಿಶೇಷ ವರದಿ-ಮಹಾನಗರ: ಕರಾವಳಿಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಹುವರ್ಷದ ಬೇಡಿಕೆಯಾಗಿರುವ “ಮಂಗಳೂರು ಐಟಿ ಪಾರ್ಕ್‌’ ನಿರ್ಮಾಣಕ್ಕೆ ಇದೀಗ ಸಿದ್ಧತೆ ನಡೆಯುತ್ತಿದೆ.

Advertisement

ಮಂಗಳೂರಿನ ದೇರೆಬೈಲ್‌ನಲ್ಲಿ ಕಿಯೋನಿಕ್ಸ್‌ ಸಂಸ್ಥೆಗೆ ಸೇರಿದ 4 ಎಕರೆ ಜಮೀನಿನಲ್ಲಿ ಐಟಿ ಪಾರ್ಕ್‌ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್‌) ಸಂಸ್ಥೆಯು ಮುಂದಾಗಿದೆ. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಿಶೇಷ ಕಾಳಜಿಯೊಂದಿಗೆ ಮಂಗಳೂರು ಐಟಿ ಪಾರ್ಕ್‌ ಸ್ಥಾಪನೆಗೆ ಉದ್ದೇಶಿಸಲಾಗಿದೆ.

ದೇರೆಬೈಲ್‌ನ (ಎ.ಜೆ.ಮೆಡಿಕಲ್‌ ಕಾಲೇಜು ಹತ್ತಿರ) 4 ಎಕರೆ ಭೂಮಿಯಲ್ಲಿ ಐಟಿ ಪಾರ್ಕ್‌ ರಚನೆಯಾಗಲಿದ್ದು ಐಟಿ ಅಭಿವೃದ್ಧಿಗೆಂದು ಈ ಭೂಮಿಯನ್ನು ಈ ಹಿಂದೆಯೇ ಮೀಸಲಿಡಲಾಗಿತ್ತು. ಇದರಲ್ಲಿ ಶೇ.40ರಷ್ಟು ಪ್ರದೇಶವು ಐಟಿ ಕಾರ್ಯಸ್ಥಳವಾಗಿರಲಿದ್ದು, ಇದರಲ್ಲಿ ಐಟಿ ಪಾರ್ಕ್‌, ರಫ್ತು ಆಧಾರಿತ ಉದ್ಯಮಗಳಿಗೆ ಮೀಸಲಾಗಿರಲಿದೆ. ಉಳಿದ ಶೇ.60ರಷ್ಟು ಸ್ಥಳವನ್ನು ವಾಣಿಜ್ಯ, ವಸತಿ, ಸಮಾಜಕ್ಕೆ ಅವಶ್ಯ ಮೂಲ ಸೌಕರ್ಯ ಗಳಿಗಾಗಿ ಮೀಸಲಿಡ ಲಾಗುತ್ತದೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ.

ಕ್ಲಸ್ಟರ್‌ ಕಂಪೆನಿಗಳಿಗೆ ಅವಕಾಶ
ಕೊರೊನಾ ಕಾರಣದಿಂದ ಐಟಿ ಉದ್ಯಮ ಕ್ಷೇತ್ರವು ಪ್ರಸ್ತುತ “ವರ್ಕ್‌ ಫ್ರಂ ಹೋಂ’ ಪರಿಕಲ್ಪನೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಕಾರಣದಿಂದ ಕ್ಲಸ್ಟರ್‌ ಮಾದರಿಯಲ್ಲಿ ಕಂಪೆನಿ ನಿರ್ಮಾಣಕ್ಕೆ ಐಟಿ ಉದ್ಯಮಿಗಳು ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಾಗಿ ಕ್ಲಸ್ಟರ್‌ ಮಟ್ಟದಲ್ಲಿ ಹಲವು ಕಂಪೆನಿಗಳು ಆರಂಭವಾಗುವ ನಿರೀಕ್ಷೆಯಿದ್ದು, ಇದಕ್ಕೆ ಪೂರಕವಾಗಿ ಐಟಿ ಪಾರ್ಕ್‌ ಮಂಗಳೂರಿನಲ್ಲಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವ ನಿರೀಕ್ಷೆಯಲ್ಲಿದೆ. ಈ ಮೂಲಕ ಸುಮಾರು 2000ಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಿಕೊಡುವುದು ಈ ಯೋಜನೆಯ ಮೂಲ ಉದ್ದೇಶ.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್‌) ಸಂಸ್ಥೆಯು ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಉತ್ತೇ ಜಿಸಲು ಆರಂಭಿಸಲಾಗಿದೆ. ಉದ್ಯಮಗಳನ್ನು ಎಲ್ಲ ಕಾಲದಲ್ಲಿಯೂ ಮುಂಚೂಣಿಯಲ್ಲಿಟ್ಟು ಜನ ಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ತೊಡಗಿಸಿ ಕೊಳ್ಳಲಾಗಿದೆ. ರಾಜ್ಯದ ಇ-ಆಡಳಿತ ಸೇವೆಗಳನ್ನು ಒದಗಿಸುವ ಮೂಲ ಉದ್ದೇಶದಿಂದ 1976ರಲ್ಲಿ ಅಸ್ತಿತ್ವಕ್ಕೆ ಬಂತು. ರಾಜ್ಯದಲ್ಲಿ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತದೆ. ಎಸ್‌ಟಿಪಿಐ ಸಂಸ್ಥೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವುದು ಹಾಗೂ ರಫ್ತು ಆಧಾರಿತ ಯೋಜನೆಗಳನ್ನು ಉತ್ತೇಜಿಸಲು ಸಹಕಾರ ನೀಡುತ್ತದೆ.

Advertisement

 ”ಶೀಘ್ರ ಕ್ರಮ’
ದೇರೆಬೈಲ್‌ನಲ್ಲಿ ಕಿಯೋನಿಕ್ಸ್‌ ಸಂಸ್ಥೆಗೆ ಸೇರಿದ 4 ಎಕ್ರೆ ಜಮೀನಿನಲ್ಲಿ ಐಟಿ ಪಾರ್ಕ್‌ ಅಭಿವೃದ್ಧಿಪಡಿಸಲು ಉದ್ದೇಶಿಸ ಲಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಸಂಸದರು, ಸಚಿವರು, ಶಾಸಕರು, ಉದ್ಯಮ ಕ್ಷೇತ್ರದ ಸಂಘಟನೆ ಪ್ರಮುಖರ ಜತೆಗೆ ಚರ್ಚಿಸಿ ಈ ಯೋಜನೆ ಶೀಘ್ರದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಲಾಗುವುದು.
-ಹರಿಕೃಷ್ಣ ಬಂಟ್ವಾಳ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ

 ”ಐಟಿ ಪಾರ್ಕ್‌ ಸಾಕಾರ ನಿರೀಕ್ಷೆ’
ಮಂಗಳೂರಿನಲ್ಲಿ ಐಟಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಯುವಕರಿಗೆ ಉದ್ಯೋಗವಕಾಶ ಸಿಗಬೇಕೆಂಬ ಇರಾದೆಯಿಂದ ನಗರದಲ್ಲಿ ಐಟಿ ಪಾರ್ಕ್‌ ಆರಂಭಿಸುವ ಬಗ್ಗೆ ಸರಕಾರಕ್ಕೆ ಮನವಿ ಮಾಡುತ್ತಲೇ ಬರಲಾಗಿದೆ. ಸದ್ಯ ಈ ಯೋಜನೆ ಸಾಕಾರದ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಐಟಿ ಪಾರ್ಕ್‌ ಆರಂಭದ ನಿರೀಕ್ಷೆಯೂ ಇದೆ.
-ಐಸಾಕ್‌ ವಾಝ್, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next