Advertisement
ಸೆಂಟ್ರಲ್ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಗಾವಿ ಈರುಳ್ಳಿ ಕೆ.ಜಿ.ಗೆ 130 ರೂ.ನಿಂದ 140ರ ವರೆಗೆ ಮಾರಾಟವಾಗಿದೆ. ಈಜಿಪ್ಟ್ ಈರುಳ್ಳಿಗೆ ರಖಂ ಆಗಿ ಕೆ.ಜಿ.ಗೆ 140 ರೂ., ಚಿಲ್ಲರೆಯಾಗಿ 150 ರೂ. ಇತ್ತು. 2ನೇ ದರ್ಜೆ ಈರುಳ್ಳಿಗೆ 125 ರೂ., ತೀರಾ ಸಣ್ಣ ಗಾತ್ರದ ಈರುಳ್ಳಿಗೆ 60-70 ರೂ. ಇತ್ತು ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲಿಯಾನ್ “ಉದಯವಾಣಿ’ಗೆ ತಿಳಿಸಿದ್ದಾರೆ. ಉಡುಪಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿದ್ದು, ಹಳೆ ಈರುಳ್ಳಿ ಕೆ.ಜಿ. 140 ರೂ., ಹೊಸತು 110 ರೂ., ಸಣ್ಣ ಗಾತ್ರದ ಈರುಳ್ಳಿ ಕೆಜಿಗೆ 90ರಿಂದ 100ರೂ. ಗಳಲ್ಲಿ ಮಾರಾಟವಾಗಿದೆ.
ಕುಂದಾಪುರ: ಏರುತ್ತಿರುವ ದರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇನ್ನೊಂದು ಬರೆ ಬೀಳುತ್ತಿದ್ದು, ಇಲ್ಲಿನ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿದೆ. ಕುಂದಾಪುರ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯವಿಲ್ಲ. ಬಹುತೇಕ ಅಂಗಡಿಗಳಲ್ಲಿ ದೊರೆಯುತ್ತಿಲ್ಲ. ಹಳೆ ಈರುಳ್ಳಿಗೆ 150 ರೂ., ಹೊಸ ಈರುಳ್ಳಿಗೆ 130 ರೂ. ಇದ್ದರೂ ಸಿಗುತ್ತಿಲ್ಲ. ಹಳೆ ಈರುಳ್ಳಿಯನ್ನು ಕಾಳಸಂತೆಯಲ್ಲಿ ಸಂಗ್ರಹಿಸಿಟ್ಟು ಅಧಿಕ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದರೂ ದಲ್ಲಾಳಿಗಳು ಅದನ್ನೂ ಅಧಿಕ ದರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಸಣ್ಣ ಸಂತೆಗಳಲ್ಲಿ ಕೂಡ ಈರುಳ್ಳಿ ಸಗಟು ಮಾರಾಟ ನಡೆಯುತ್ತಿಲ್ಲ.