Advertisement

ಮಂಗಳೂರಿನಲ್ಲಿ ನಡೆದದ್ದು ಸರ್ಕಾರಿ ಪ್ರಾಯೋಜಿತ ಗಲಭೆ: ನನ್ನ ಮೇಲೆ ಆರೋಪ ಮಾಡಿದರೂ ಏನೂ ಆಗಲ್ಲ

10:06 AM Dec 25, 2019 | Team Udayavani |

ಬೆಂಗಳೂರು: ಮಂಗಳೂರಿನಲ್ಲಿ ನಡೆದದ್ದು ಸರ್ಕಾರಿ ಪ್ರಾಯೋಜಿತ ಗಲಭೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಾಗಿ ರಾಜ್ಯದಲ್ಲಿ ಗಲಭೆ – ಹಿಂಸಾಚಾರ ಸಷ್ಟಿಸಲಾಗಿದೆ. ಬಿಜೆಪಿಯ ಒಳಸಂಚು ಇದಕ್ಕೆಲ್ಲಾ ಕಾರಣ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ನಿಷೇಧಾಜ್ಞೆಯನ್ನು ಯಾರು, ಯಾಕೆ ಜಾರಿ ಮಾಡಿದರು ಎನ್ನುವ ಮಾಹಿತಿಯೂ ಮುಖ್ಯಮಂತ್ರಿಗಿಲ್ಲ. ಯಾರೂ, ಯಾರ ಹಿಡಿತದಲ್ಲೂ ಇಲ್ಲ. ಮಂಗಳೂರಿನಲ್ಲಿ ಪೊಲೀಸ್‌ ದೌರ್ಜನ್ಯ, ಗೋಲಿಬಾರ್‌ಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ. ಸರ್ಕಾರದ ವೈಫ‌ಲ್ಯವೇ ಇದಕ್ಕೆ ಕಾರಣ. ಬಿಜೆಪಿ ಸರ್ಕಾರ ದೇಶದ ಜನರ ವಿರುದ್ಧದ ದೌರ್ಜನ್ಯವನ್ನು ಕೈಬಿಡಲಿ. ಕೂಡಲೇ ಗೋಲಿಬಾರ್‌ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.

ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ, ದೇಶದ ಬಹುಪಾಲು ಜನ ತಮ್ಮ ಪ್ರತಿರೋಧವನ್ನು ಹೊರಹಾಕುತ್ತಿದ್ದಾರೆ ಎನ್ನುವಂತಹ ವಿಚಾರವನ್ನ ಜನರ ಪ್ರತಿನಿಧಿಯಾಗಿ ನಾನು ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಜನಪ್ರತಿನಿಧಿಯಾಗಿ ಜನರ ಮನಸ್ಥಿತಿಯ ಬಗ್ಗೆ ಆಳುವ ಸರ್ಕಾರಕ್ಕೆ ತಿಳಿಸುವುದು ತಪ್ಪೇ?. ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಲು ಕೇಂದ್ರ ಸಚಿವ ಸುರೇಶ್‌ ಅಂಗಡಿ ರಾಜ್ಯದ ಗೃಹ ಸಚಿವರೇ? ಅಥವಾ ಮುಖ್ಯಮಂತ್ರಿಯೇ? ಗನ್‌ ಇದ್ದ ಮಾತ್ರಕ್ಕೆ ಹೊಡೆಯಬೇಕು ಎಂದು ಅರ್ಥವೇ? ಹೀಗೆ ಹೇಳಿದ್ದು ಸರಿಯೇ? ಗುಪ್ತಚರ ಇಲಾಖೆ ರಾಜ್ಯದಲ್ಲಿ ಇಲ್ಲವೇ? ಎಲ್ಲ ದುರ್ಘ‌ಟನೆಗಳು ಆದ ಬಳಿಕವೇ ಇವರು ಬರುತ್ತಾರೆಯೇ? ಎಂದು ಖಾದರ್‌ ಪ್ರಶ್ನಿಸಿದರು.

ಅಸ್ಸಾಂ, ತ್ರಿಪುರ, ಬಿಹಾರ್‌, ಆಂಧ್ರಪ್ರದೇಶ, ಒರಿಸ್ಸಾದಲ್ಲಿ ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆಯೇ? ಬಿಜೆಪಿ ಅಂಗ ಪಕ್ಷಗಳೇ ಪ್ರತಿಭಟನೆ ಮಾಡುತ್ತಿಲ್ಲವೇ? ಹಾಗಿದ್ದರೆ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಿಂದ ಹೊರಗೆ ಬರಲಿ ಎಂದು ಅವರು ಸವಾಲು ಹಾಕಿದರು. 70 ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರಗಳು ದೂರದಷ್ಟಿಯಿಂದ ಸಂಪಾದಿಸಿದ ದೇಶದ ಸರ್ಕಾರಿ ಸಂಪತ್ತನ್ನು ಬಿಜೆಪಿ ನೇತತ್ವದ ಕೇಂದ್ರ ಸರ್ಕಾರ ಕೆಲವೇ ವ್ಯಕ್ತಿಗಳಿಗೆ ಮಾರಲು ಹೊರಟಿದೆ. ಇದಕ್ಕೆ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ ಎಂದರು.

ಬಿಜೆಪಿ ದೇಶದ ಉದ್ದಗಲಕ್ಕೂ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಜಾರ್ಖಂಡ್‌ ಉತ್ತಮ ಉದಾಹರಣೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತವಾಗಲಿದೆ. ಈ ಭಯದಿಂದಲೇ ದೇಶದ ಜನರ ಯೋಚನೆಗಳ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರದ ವೈಫ‌ಲ್ಯಗಳನ್ನು ಮರೆಮಾಚಲು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಖಾದರ್‌ ಕಿಡಿಗಾರಿದರು.

Advertisement

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನ, ಮಹಾತ್ಮ ಗಾಂಧೀಜಿ ತತ್ವ- ದರ್ಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಈ ದೇಶದ ಜನತೆ ಕ್ಷಮಿಸುವುದಿಲ್ಲ. ಬಾಬಾ ಸಾಹೇಬರ ಸಂವಿಧಾನ ಬದಲಾಯಿಸಿ, ತಮ್ಮದೇ ಸಂವಿಧಾನ ತರುವ ದುರುದ್ದೇಶದಿಂದ ಇಂತಹ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಭಾರತೀಯರು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ನನ್ನ ವಿರುದ್ಧ ಎಷ್ಟೇ ಆರೋಪ ಮಾಡಿದರೂ ಏನೂ ಆಗಲ್ಲ: ಖಾದರ್‌
ಬೆಂಗಳೂರು: ನನ್ನ ವಿರುದ್ಧ ಎಷ್ಟೇ ಆರೋಪಗಳನ್ನು ಮಾಡಿದರೂ ಏನು ಆಗುವುದಿಲ್ಲ. ನನ್ನ ಬಗ್ಗೆ ನನ್ನ ಕ್ಷೇತ್ರದ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಖಾದರ್‌ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲವೂ ವಿಚಾರಣೆಯಲ್ಲಿ ಹೊರಗೆ ಬರಲಿ. ಯಡಿಯೂರಪ್ಪ ಲಾಠಿ ಚಾರ್ಜ್‌ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆದರೂ ಲಾಠಿ ಚಾರ್ಜ್‌ ಮಾಡಲಾಗುತ್ತದೆ, ಗೋಲಿಬಾರ್‌ ನಡೆಯುತ್ತದೆ. ಹಾಗಾದರೆ, ಪೊಲೀಸ್‌ ಇಲಾಖೆ ಯಡಿಯೂರಪ್ಪ ಸರ್ಕಾರದ ಹಿಡಿತದಲ್ಲಿ ಇಲ್ಲವೇ? ಎಲ್ಲವೂ ವಿಚಾರಣೆಯಲ್ಲಿ ಹೊರಗೆ ಬರಲಿ. ಅದಕ್ಕಾಗಿ ನ್ಯಾಯಾಂಗ ತನಿಖೆಯನ್ನೇ ನಡೆಸಬೇಕು ಎಂದು ಖಾದರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next