ಮಂಗಳೂರು: ಚತುಷ್ಪಥ ಹೆದ್ದಾರಿಗೆ ಜಮೀನು ಕಳೆದುಕೊಳ್ಳುವ ಭೂಮಾಲಕರಿಗೆ ಯೋಗ್ಯ ಪರಿಹಾರ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿ ಮುಂಭಾಗ ಆರಂಭಿಸಿರುವ ಪ್ರತಿಭಟನಾ ಧರಣಿ ಎರಡನೇ ದಿನವೂ ಮುಂದುವರಿಯಿತು.
ಪ್ರಾಧಿಕಾರದ ಅಧಿಕಾರಿಗಳು ಯಾರೂ ಪ್ರತಿಭಟನಕಾರರನ್ನು ಮಾತನಾಡಿಸಲಿಲ್ಲ. ಆದರೆ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಕಾರರಿಂದ ಮಾಹಿತಿ ಪಡೆದುಕೊಂಡರಲ್ಲದೆ ಧರಣಿ ಹಿಂಪಡೆಯುವಂತೆ ಹಾಗೂ ಕೆಲ ದಿನಗಳಲ್ಲೇ ಡಿಸಿಯವರು ಭೂಮಾಲಕರ ಸಭೆ ಕರೆಯಲಿರುವುದಾಗಿ ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಪ್ರತಿಕ್ರಿಯಿಸಿ, ನಾವು ಡಿಸಿಯವರಿಗೆ ಈಗಾಗಲೇ ಎಲ್ಲ ವಿಚಾರ ತಿಳಿಸಿದ್ದೇವೆ. ಹಾಗಿದ್ದರೂ ಅವರು ಸಭೆ ಕರೆಯುವುದಾದರೆ ಬರುತ್ತೇವೆ. ಆದರೆ ಅದಕ್ಕೆ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಅಧಿಕಾರಿ ಹಾಗೂ ಮಂಗಳೂರು ಯೋಜನಾ ನಿರ್ದೇಶಕರು ಕೂಡ ಬರಬೇಕು ಎಂದರು.
ನಮಗೆ ಜಿಲ್ಲಾಧಿಕಾರಿಗಳು ನ್ಯಾಯ ಸಲ್ಲಿಸಲು ಇದುವರೆಗೆ ಯತ್ನ ಮಾಡಿದ್ದಾರೆ. ಆದರೆ ನಮ್ಮ ಜಮೀನಿಗೆ ಅರ್ಹವಾದ ಪರಿಹಾರ ಶಿಫಾರಸು ಮಾಡಿರುವುದನ್ನು ಎನ್‌ಎಚ್‌ಎಐ ಅಧಿಕಾರಿಗಳು ಕಡಿಮೆ ಮಾಡಲು ಯತ್ನಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರು ಕಚೇರಿಗೆ, ಅಲ್ಲಿಂದ ದಿಲ್ಲಿ ಕಚೇರಿಗೆ ಪತ್ರ ಸಂವಹನದಲ್ಲೇ ಸಾಕಷ್ಟು ವಿಳಂಬವಾಗಿದೆ, 2016ರಲ್ಲಿ ಪರಿಹಾರದ ಮೊತ್ತ 483 ಕೋಟಿ ರೂ,. ಇದ್ದುದು 1113 ಕೋಟಿ ರೂ.ಗೆ ಏರಿಕೆಯಾಗಿದೆ, ಇನ್ನೊಂದೆಡೆ ಭೂಸ್ವಾಧೀನವಾಗದೆ ಕಾಮಗಾರಿ ಕುಂಠಿತವಾಗುತ್ತಿದೆ ಎಂದರು.
ಎರಡನೇ ದಿನದ ಪ್ರತಿಭಟನ ಸಭೆಯಲ್ಲಿ ಕುಡುಪು, ತಿರುವೈಲು, ಅಡೂxರು ಗ್ರಾಮಗಳ ಭೂಮಾಲಕರು ಪಾಲ್ಗೊಂಡಿದ್ದರು.