Advertisement

ಮುಂದುವರಿದ ಗಾಳಿ -ಮಳೆ; ವ್ಯಕ್ತಿ ಸಾವು; ಮನೆ, ಕೃಷಿ ತೋಟಗಳಿಗೆ ಹಾನಿ

10:07 AM Jun 13, 2020 | sudhir |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಭಾರೀ ಮಳೆ-ಗಾಳಿಯಿಂದಾಗಿ ಕೆಲವು ಕಡೆ ಕೃಷಿ, ಮನೆಗೆ ಹಾನಿಯಾಗಿದ್ದರೆ ಗುರುಪುರದಲ್ಲಿ ಮನೆಯ ಆವರಣಗೋಡೆ ವ್ಯಕ್ತಿಯ ಮೇಲೆ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಬೆಳ್ತಂಗಡಿ ತಾ|ನ ಕುಪ್ಪೆಟ್ಟಿ ಪ್ರದೇಶದಲ್ಲಿ ಭಾರೀ ಗಾಳಿಯಿಂದ ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಕೆಲವು ಕಡೆ ಭಾರೀ ಮಳೆ ಯಾಗುತ್ತಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.

ಗುರುಪುರ: ವ್ಯಕ್ತಿ ಸಾವು
ಗುರುಪುರ ಗ್ರಾಮ ಪಂ. ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಗುಡ್ಡೆಯ ನಿವಾಸಿ ನಾರಾಯಣ ನಾಯ್ಕ (52) ಅವರ ಮೇಲೆ ಅವರಣ ಗೋಡೆ ಜರಿದು ಬಿದ್ದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ಅಡಿಕೆ ತೋಟಗಳಿಗೆ ಹಾನಿ
ಜಿಲ್ಲೆಯ ಬಂಟ್ವಾಳ, ಮೂಡುಬಿದಿರೆ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ ಸೇರಿ ದಂತೆ ಕೆಲವು ಕಡೆ ಭಾರೀ ಗಾಳಿ ಮಳೆಯಾಗಿದ್ದು ಕೆಲವು ಕಡೆ ಅಪಾರ ಹಾನಿ ಉಂಟಾಗಿದೆ. ಗಾಳಿಗೆ ಮಂಗಳೂರಿನ ಅತ್ತಾವರ, ಕೊಟ್ಟಾರ ಚೌಕಿ ಸೇರಿದಂತೆ ಕೆಲವು ಕಡೆಗಳಲ್ಲಿ ರಸ್ತೆಗೆ ಮರ ಬಿದ್ದಿತ್ತು. ಗುರುವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿಯ ರಭಸಕ್ಕೆ ನಗರದ ಬೆಂಗ್ರೆಯ ಅಳಿವೆಬಾಗಿಲು ಬಳಿಯ ರಾಣಿ ಅಬ್ಬಕ್ಕ ಪಾರ್ಕ್‌ ಬಳಿ ಇರುವ ಮನೆಯೊಂದಕ್ಕೆ ಮರಬಿದ್ದ ಘಟನೆ ನಡೆದಿತ್ತು.

ಕುಪ್ಪೆಟ್ಟಿಯಲ್ಲಿ ಕೃಷಿ, ಮನೆಗೆ ಹಾನಿ
ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಸುತ್ತಮುತ್ತ ವಿಪರೀತ ಸುಳಿಗಾಳಿ ಬೀಸಿದ ಪರಿಣಾಮ ಮನೆ, ಅಡಿಕೆ ತೋಟಗಳಿಗೆ ಭಾರೀ ಹಾನಿ ಆಗಿದೆ. ಸುಮಾರು 800ಕ್ಕಿಂತ ಅಧಿಕ ಅಡಿಕೆ ಮರಗಳು, ಗೇರುಬೀಜ ಮರಗಳು ಧರಾಶಾಯಿಯಾಗಿವೆ. ನರ್ಸಪಾಲು ರವಿ
ಕುಮಾರ್‌ ಅವರ 400 ಫ‌ಲ ಬರುವ ಅಡಿಕೆಮರ, ಬಾಳೆಗಿಡ, ಧರೆಗುಳಿದಿದ್ದರೆ ಪಕ್ಕದ ಯೋಗೀಶ್‌ ಅವರ 200ಕ್ಕೂ ಹೆಚ್ಚಿನ ಗೇರುಬೀಜದ ಮರಗಳು ನೆಲಸಮವಾಗಿದೆ. ಬರಮೇಲು ಈಶ್ವರಪೂಜಾರಿ, ನವೀನ್‌ ಶೆಟ್ಟಿ ಅವರ ಮನೆ, ಕೃಷಿ ತೋಟಗಳಿಗೂ ಹಾನಿಯಾಗಿದೆ.

Advertisement

ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಗಾಳಿಯ ರಭಸಕ್ಕೆ ಯಾರ್ಯ ಸಮೀಪದ ಸುಂದರಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುತ್ತಿಲ ಸಮೀಪದ ಆದಂ ಅವರ ಮಾಡಿನ ಹೆಂಚುಗಳು ಹಾರಿಹೋಗಿವೆ. ವಿದ್ಯುತ್‌ ಸಂಪರ್ಕ ವ್ಯತ್ಯಯವಾಗಿತ್ತು.

ಸಿಡಿಲಿನ ಆಘಾತ
ಸಿಡಿಲಿನ ಆಘಾತದ ಪರಿಣಾಮ ಸುಳ್ಯದ ವ್ಯಕ್ತಿಯೋರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಜಯನಗರದ ನಾರಾಜೆಯಲ್ಲಿನ ಸಹೋದರಿ ಮನೆಗೆ ಬಂದಿದ್ದ ಜಯರಾಮ ಅವರು ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲಾಘಾತಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಬಳಿಕ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಉಡುಪಿ: ವಿವಿಧೆಡೆ ಹಾನಿ
ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಗಾಳಿ ಮಳೆಗೆ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ನಿವಾಸಿಗಳಾದ ದೇವೇಂದ್ರ ನಾಯಕ್‌ ಅವರ ಮನೆಗೆ ಹಾನಿಯಾಗಿ 15 ಸಾವಿರ ನಷ್ಟ ಸಂಭವಿಸಿದ್ದರೆ ಸುಶೀಲಾ ನಾಯ್ಕ ಅವರ ಮನೆಗೆ ಹಾನಿಯಾಗಿದೆ. ನಗರದಲ್ಲಿ ಮಳೆಗೆ ನಗರ ಹಾಗೂ ಆಸುಪಾಸುಗಳ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.

ಕುಂದಾಪುರ ತಾಲೂಕಿನಲ್ಲಿ ಅಂಗನವಾಡಿ, ಹಾಲು ಉತ್ಪಾದಕರ ಸಂಘದ ಕಚೇರಿ ಮತ್ತು ಹಲವು ಮನೆಗಳಿಗೆ ಹಾನಿಯಾಗಿದೆ. ಉಳೂ¤ರು ಗ್ರಾಮದ ಅಂಗನವಾಡಿ ಮೇಲೆ ಮರ ಬಿದ್ದಿದೆ. ಅಂಗನವಾಡಿ ಇನ್ನೂ ತೆರೆಯದೇ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿ ಮೇಲೆ ಮಳೆಯಿಂದಾಗಿ ಹಾನಿಯಾಗಿದೆ. ಗಜೇಂದ್ರ, ಗಿರಿಜಾ, ಲಕ್ಷ್ಮಿ, ಚಿಕ್ಕು, ಗುಲಾಬಿ, ಪ್ರಭಾಕರ, ತೆಕ್ಕಟ್ಟೆಯ ಗುಲಾಬಿ ಅವರ ಕೊಟ್ಟಿಗೆಗೆ, ಹೆಂಗವಳ್ಳಿ ಗ್ರಾಮದ ಆನಂದ ಕುಲಾಲ್‌ ಅವರ ತೋಟಕ್ಕೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next