Advertisement

ಮಂಗಳೂರು: ಆರೋಗ್ಯ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಶೀಘ್ರ ಆರಂಭ

12:22 AM Aug 22, 2022 | Team Udayavani |

ಮಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಮಹತ್ವದ ಯೋಜನೆಗೆ ಈಗ ಹಸುರು ನಿಶಾನೆ ದೊರಕಿದ್ದು, ಸದ್ಯವೇ ಆರಂಭವಾಗುವ ನಿರೀಕ್ಷೆಯಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ವೈದ್ಯಕೀಯ, ಅರೆ ವೈದ್ಯ ಕೀಯ ವಿಭಾಗಗಳ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ವಿ.ವಿ. ಸಂಯೋಜಿತ ವಿವಿಧ ಕಾಲೇಜುಗಳ ಪ್ರಮುಖರು, ವಿದ್ಯಾರ್ಥಿಗಳು ವಿ.ವಿ.ಯ ಕೇಂದ್ರ ಕಚೇರಿ ಇರುವ ಬೆಂಗಳೂರಿಗೆ ಹೋಗುವ ಅನಿವಾರ್ಯ ತಪ್ಪಲಿದೆ. ಐದು ಜಿಲ್ಲೆಗಳ ಸುಮಾರು 120ಕ್ಕೂ ಹೆಚ್ಚು ಕಾಲೇಜುಗಳಿಗೆ ಇದರಿಂದ ಪ್ರಯೋಜನವಾಗಲಿದೆ.

ಈ ಕೇಂದ್ರದ ಸ್ಥಾಪನೆಗೆ 2020ರಲ್ಲಿ ಶಿಲಾನ್ಯಾಸವಾಗಿತ್ತಾ ದರೂ ತಾಂತ್ರಿಕ ಕಾರಣಗಳಿಂದ ಆ ಬಳಿಕ ನನೆಗುದಿಗೆ ಬಿದ್ದಿತ್ತು.

ಸುಸಜ್ಜಿತ ಸಿಮ್ಯುಲೇಷನ್‌ ಸೆಂಟರ್‌, ಆನ್‌ಲೈನ್‌ ಲೈಬ್ರೆರಿ, ಡಿಜಿಟಲ್‌ ಮೌಲ್ಯಮಾಪನ ವ್ಯವಸ್ಥೆ, ಡೆಂಟಲ್‌ ರಿಸರ್ಚ್‌ ಸೆಂಟರ್‌, ಪರೀಕ್ಷಾ ಕೇಂದ್ರ, ಪಿಸಿಯೋಥೆರಪಿ ಪುನರ್ವಸತಿ ಕೇಂದ್ರ ಮತ್ತಿತರ ಸೌಲಭ್ಯ ಇಲ್ಲಿ ಇರಲಿದೆ. ವಿಶಾಲ ಲ್ಯಾಬ್‌ ಕೂಡ ಆರಂಭವಾಗಲಿದೆ. ಆಟೋಟಗಳಿಗೆ ಬೇಕಾದ ಕ್ರೀಡಾಂಗಣವೂ ಇರಲಿದೆ. ಈಜುಕೊಳ ಸ್ಥಾಪನೆಗೆ ನಿರ್ಧರಿಸಲಾಗಿತ್ತಾದರೂ ಸದ್ಯ ಕೈಬಿಡಲಾಗಿದೆ.

ಸ್ಥಗಿತವಾಗಿದ್ದ ಯೋಜನೆಗೆ ಮರುಜೀವ
ಮೇರಿಹಿಲ್‌ನ 2 ಎಕರೆ ಜಾಗದಲ್ಲಿ ಪ್ರಾದೇಶಿಕ ಕೇಂದ್ರ ಆರಂಭಿಸಲಾಗುವುದು ಎಂದು 2019ರಲ್ಲಿಯೇ ಘೋಷಣೆ ಯಾಗಿತ್ತು. ಶಿಲಾನ್ಯಾಸ ನಡೆದಿದ್ದರೂ ಆ ಬಳಿಕ ಕೊರೊನಾ ಕಾರಣದಿಂದ ಯೋಜನೆಗೆ ಹಿನ್ನಡೆಯಾಗಿತ್ತು. ಜತೆಗೆ ಪ್ರಸ್ತಾವಿತ ಯೋಜನೆಗೆ ಆಮೂಲಾಗ್ರ ಬದಲಾವಣೆ ತಂದು ಹೊಸ ಯೋಜನೆ ಸಿದ್ಧಪಡಿಸಲು ವಿಳಂಬವಾದ್ದರಿಂದ ಕೇಂದ್ರ ಆರಂಭ ಕಡತದಲ್ಲೇ ಬಾಕಿಯಾಗಿತ್ತು. ಪ್ರಸಕ್ತ ಎಲ್ಲ ತೊಡಕುಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಲು ವಿ.ವಿ. ನಿರ್ಧರಿಸಿದೆ. ತಿಂಗಳೊಳಗೆ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಕೂಡ ನಡೆದು ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

Advertisement

ಮಂಗಳೂರಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಪ್ರಾದೇಶಿಕ ಕೇಂದ್ರ ಆರಂಭಿಸುವ ಯೋಜನೆ ಕೊರೊನಾ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಯೋಜನೆಯನ್ನು ಪೂರ್ಣ ಮಟ್ಟದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಶೀಘ್ರವೇ ಇದರ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು.
-ಡಾ| ಎಂ.ಕೆ. ರಮೇಶ್‌,
ಕುಲಪತಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next