ಮಂಗಳೂರು : ಮಣಿಪಾಲದ ಬಳಿಕ ಕೊಣಾಜೆ, ದೇರಳಕಟ್ಟೆ ಪ್ರದೇಶ ಆರೋಗ್ಯ ಮತ್ತು ಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯನ್ನು ಪಡೆಯುತ್ತಿದ್ದು, ಇದರೊಂದಿಗೆ ಕುಂದಾಪುರದಿಂದ ಕಾಸರ ಗೋಡುವರೆಗೆ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಆರೋಗ್ಯ, ಜ್ಞಾನ ಮತ್ತು ಪ್ರವಾಸೋದ್ಯಮ ಕಾರಿ ಡಾರ್ ನಿರ್ಮಾಣಕ್ಕೆ ಯೋಜನೆ ತರಲು ಮುಂದಿನ ಬಜೆಟ್‌ನಲ್ಲಿ ಪ್ರಯತ್ನಿ ಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ಕುರ್ನಾಡು ಜಿ.ಪಂ. ಕ್ಷೇತ್ರದ ಜಿ. ಪಂ., ಬಂಟ್ವಾಳ ತಾ. ಪಂ. ಮತ್ತು ಕುರ್ನಾಡು ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಾದ ಪಜೀರು, ಕುರ್ನಾಡು, ಬಾಳೆಪುಣಿ, ನರಿಂಗಾನ, ಇರಾ, ಸಜೀಪನಡು ಗ್ರಾಮ ಪಂಚಾಯತ್‌ಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದ.ಕ., ಬಂಟ್ವಾಳ ತಾಲೂಕು ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಕಲಾಂಗರ, ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ, ವಿಕಲಾಂಗರ ಬೃಹತ್ ಆರೋಗ್ಯ ಶಿಬಿರ ಮತ್ತು ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇರಳಕಟ್ಟೆ ಸಹಿತ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ಈ ಪ್ರದೇಶದ ಜನರ ಆರೋಗ್ಯ ಸಂಬಂಧಿ ವಿಚಾರಗಳು ಉತ್ತಮವಾಗಿದ್ದು, ಕೊಣಾಜೆ ಸಹಿತ ದೇರಳಕಟ್ಟೆಗಳಲ್ಲಿ ಶೈಕ್ಷಣಿಕ, ವೈದ್ಯ ಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಮಣಿಪಾಲದಿಂದ ಕೊಣಾಜೆವರೆಗೆ ಕಾರಿ ಡಾರ್ ಪಾಲಿಸಿಯನ್ನು ತಂದರೆ ರಸ್ತೆ ಸಹಿತ ಮೆಟ್ರೋ ರೈಲು, ಆಧುನಿಕ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದ್ದು, ಇದರೊಂದಿಗೆ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಪೂರಕ ವಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಚರ್ಚಿಸಿ ಕಾರಿಡಾರ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ವಿಕಲರಿಗೆ ಅವಕಾಶ ಅಗತ್ಯ
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತರಾಮ್ ಶೆಟ್ಟಿ ಮಾತನಾಡಿ, ವಿಕಲಚೇತನರಿಗೆ ಅನುಕಂಪ ಅನಗತ್ಯ. ನಮ್ಮಂತೆ ಜೀವನ ಸಾಗಿಸಲು ಅವಕಾಶ ಕಲ್ಪಿಸಬೇಕಿದೆ ಎಂದರು.
ಬಾಳೆಪುಣಿ ಗ್ರಾ. ಪಂ. ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಯೇನೆಪೊಯ ವಿವಿ ಉಪಕುಲಪತಿ ಡಾ| ವಿಜಯ ಕುಮಾರ್, ಕಣಚೂರು ವೈದ್ಯಕೀಯ ಕಾಲೇಜಿನ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಎಂಸಿಎಫ್ ಮುಖ್ಯ ವ್ಯವಸ್ಥಾಪಕ ಪಿ. ಜಯಶಂಕ್ ರೈ, ವ್ಯವಸ್ಥಾಪಕ ಪಿ.ಜೆ. ರೈ, ಡಿಜಿಎಂ ಯೋಗೀಶ್, ಎಚ್.ಆರ್. ಸುರೇಶ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯರಾದ ಹೈದರ್ ಕೈರಂಗಳ, ನವೀನ್ ಪಾದಲ್ಪಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಕಾಜವ, ಉಮ್ಮರ್ ಪಜೀರ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಆಯುಶ್ ಇಲಾಖೆಯ ಇಕ್ಬಾಲ್, ಆಯುಷ್ ಫೌಂಡೇಶನ್ ಅಧ್ಯಕ್ಷ ಡಾ| ಗೋಪಾಲಕೃಷ್ಣ ನಾಯಕ್, ಫಾದರ್ ಮುಲ್ಲರ್ ಪ್ರಾಂಶುಪಾಲ ಡಾ| ಶಿವಪ್ರಸಾದ್, ಕ್ಯಾನ್ಸರ್ ತಜ್ಞ ಡಾ| ರೋಹನ್ ಗಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ, ಸವಿತಾ ಹೇಮನಾಥ ಶೆಟ್ಟಿ, ಶಾಹುಲ್ ಹಮೀದ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಜಿ.ಪಂ. ಸದಸ್ಯೆ ಮಮತಾ ಗಟ್ಟಿ ಸ್ವಾಗತಿಸಿದರು. ಡಾ| ದೀಪಾ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮನೆ ನಿರ್ಮಾಣ ಯೋಜನೆ
ವಿಕಲಚೇತನರು ಮನೆ ನಿರ್ಮಾಣ ಬೇಡಿಕೆ ಮುಂದಿಟ್ಟುಕೊಂಡು ಪಂಚಾಯತ್‌ಗಳಿಗೆ ಹೋಗಬೇಕಿಲ್ಲ. ಜಿಲ್ಲಾಧಿಕಾರಿ ಮುಖಾಂತರ ಪಟ್ಟಿ ತರಿಸಿ ಮನೆ ನಿರ್ಮಿಸಿಕೊಡುವ ಯೋಜನೆ ಸರಕಾರ ಹಮ್ಮಿಕೊಂಡಿದೆ.
– ಯು.ಟಿ. ಖಾದರ್,
ಜಿಲ್ಲಾ ಉಸ್ತುವಾರಿ ಸಚಿವರು