1,000 ಅಡಿಯಷ್ಟು ಕೊರೆದರೂ ನೀರು ಸಿಗುತ್ತಿಲ್ಲ!
Advertisement
ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಕೊಳವೆಬಾವಿಗಳು ನೀರಿನ ಪ್ರಮುಖ ಮೂಲಗಳು. ಸರಕಾರಿ ಅಂಕಿ-ಅಂಶಗಳ ಪ್ರಕಾರವೇ 2022ರ ಎಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಈ ತಾಲೂಕುಗಳಲ್ಲಿ ಒಟ್ಟು 848 ಬೋರ್ ವೆಲ್‌ಗಳನ್ನು ಕೊರೆಯಿಸಲಾಗಿದೆ. ಇವುಗಳಲ್ಲಿ 634 ಕೊಳವೆಬಾವಿಗಳಲ್ಲಿ ನೀರು ದೊರಕಿದ್ದು, 214ರಲ್ಲಿ ನೀರೇ ಇಲ್ಲ!
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯಲು, ತೋಟ, ಬೆಳೆಗಳಿಗೂ ಅಂತರ್ಜಲವನ್ನೇ ಆಶ್ರಯಿಸಲಾಗುತ್ತದೆ. ಬಾವಿ, ಕೆರೆ ಹೊರತುಪಡಿಸಿ ನೀರಿಗಾಗಿ ಕೊಳವೆಬಾವಿ ಅನಿವಾರ್ಯ. ಆದರೆ ಮಳೆ ಕಾಡುಗಳ ನಾಶ, ಪಶ್ಚಿಮ ಘಟ್ಟಗಳಲ್ಲಿ ಹೆಚ್ಚುತ್ತಿರುವ ಭೂಮಾಫಿಯಾ, ಅತಿಯಾದ ಮರಳುಗಾರಿಕೆ, ಕಾಳ್ಗಿಚ್ಚು ಮೊದಲಾದ ಕಾರಣಗಳಿಂದ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪರಿಸರ ತಜ್ಞರ ಅಭಿಪ್ರಾಯ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದರೂ ನೇತ್ರಾವತಿ, ಪಯಸ್ವಿನಿ, ಫಲ್ಗುಣಿ, ನಂದಿನಿ, ಕುಮಾರಧಾರಾ, ಶಾಂಭವಿ ಮೊದಲಾದ ಜೀವನದಿಗಳ ಜತೆಗೆ ಅಣಿಯೂರು ಹೊಳೆ, ಗುಂಡ್ಯ ಹೊಳೆ, ಕೆಂಪು ಹೊಳೆ, ಅಡ್ಡಹೊಳೆ ಮೊದಲಾದ ಹಲವು ನದಿ ಕವಲುಗಳಲ್ಲಿ ಎಪ್ರಿಲ್ ತಿಂಗಳಲ್ಲೇ ನೀರು ಬರಿದಾಗಿದ್ದು,
ಅಂತರ್ಜಲ ಅಪಾಯದಲ್ಲಿರುವ ಸೂಚಕವಾಗಿದೆ.
Related Articles
ಮಳೆ ನೀರು ಪ್ರಾಕೃತಿಕವಾಗಿ ಇಂಗಿ ಇಳೆ ಸೇರಿದಾಗ ಮಾತ್ರ ಅಂತರ್ಜಲ ಹೆಚ್ಚಲು ಸಾಧ್ಯ. ಆದರೆ ಪ್ರಾಕೃತಿಕ ನೀರಿನ ಹರಿವಿಗೆ ಅಡೆತಡೆಗಳನ್ನು ಉಂಟು ಮಾಡಿದಾಗ ಅದೆಷ್ಟು ಮಳೆಯಾದರೂ ನೀರು ಭೂಮಿಗೆ ಇಂಗಲು ಸಾಧ್ಯವಾಗುವುದಿಲ್ಲ. ಹಿಂದೆಲ್ಲ ಕೊಳವೆ ಬಾವಿ 200ರಿಂದ 300 ಅಡಿಗಳಲ್ಲಿ ಸಿಗುತ್ತಿತ್ತು. ನಮ್ಮ ನೀರಿನ ಬೇಡಿಕೆ ಅತಿಯಾದಂತೆ ಕೊಳವೆಬಾವಿಗಳ ಕೊರೆತ ಹೆಚ್ಚಿದೆ. ಭೂಮಿಯಲ್ಲಿ ಪದರಗಳಲ್ಲಿ ಹರಿಯುವ ಅಂತರ್ಜಲಕ್ಕೆ ಅಡ್ಡಿ ಪಡಿಸುವುದರಿಂದ ನೀರು ಮೇಲೆತ್ತಿದ್ದಂತೆ ನೀರಿನ ಪದರಗಳು ಕುಸಿದು ಹರಿವಿಗೆ ತಡೆಯಾಗುತ್ತದೆ. ಇದರಿಂದ ಅಂತರ್ಜಲ ಕ್ಷೀಣಿಸುವುದು ಮಾತ್ರವಲ್ಲ, ಮಳೆಗಾಲದಲ್ಲಿ ಭೂಕುಸಿತಕ್ಕೂ ಕಾರಣವಾಗುತ್ತಿದೆ. ಅಂತರ್ಜಲ ಆಳಕ್ಕೆ ಹೋದಷ್ಟು ವಿಷಪೂರಿತವಾಗಿರುತ್ತದೆ. ಅದನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಕೂಡ ಅತೀ ಅಗತ್ಯ.
– ಡಾ| ಕೆ.ವಿ. ರಾವ್, ಹಿರಿಯ ವಿಜ್ಞಾನಿ, ಪಿಲಿಕುಳ
ಪ್ರಾದೇಶಿಕ ವಿಜ್ಞಾನ ಕೇಂದ್ರ
Advertisement
ಸತ್ಯಾ ಕೆ.