Advertisement

ಮಂಗಳೂರು ಗೋಲಿಬಾರ್‌ ಪ್ರಕರಣ ಭಯ ಸೃಷ್ಟಿಸುವ ಕೃತ್ಯದ ಭಾಗ: ಸಚಿವ ಬೊಮ್ಮಾಯಿ

09:57 AM Feb 21, 2020 | sudhir |

ಬೆಂಗಳೂರು: ಮಂಗಳೂರು ಗೋಲಿಬಾರ್‌ ಪ್ರಕರಣವು ಕೋಮುಗಲಭೆ ಅಲ್ಲ, ಹಿಂಸಾತ್ಮಕ ಕೃತ್ಯಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದ ಒಂದು ಭಾಗ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ವಿಧಾನಸಭೆಯಲ್ಲಿ ಸಾರ್ವಜನಿಕ ಮಹತ್ವದ ವಿಷಯ ಕುರಿತು ವಿಪಕ್ಷಗಳ ಸದಸ್ಯರು ಪ್ರಸ್ತಾವಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯೆ ನೀಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹೋರಾಟದ ನೆಪದಲ್ಲಿ ನಡೆದ ಮಂಗಳೂರು ಗಲಭೆಯು ಖಂಡಿತವಾಗಿಯೂ ಕೋಮುಗಲಭೆ ಅಲ್ಲ. ಅದರಾಚೆಯ ಅಂದರೆ ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿಸುವ ಮೂಲಕ ರಾಷ್ಟ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಚಟುವಟಿಕೆಗಳ ಒಂದು ಭಾಗವಾಗಿತ್ತು. ಆ ಘಟನೆಗೂ ಮುನ್ನ ಪ್ರಚೋದನಾತ್ಮಕ ಸಂದೇಶಗಳು ಕೇರಳ, ಉತ್ತರಪ್ರದೇಶ ಸಹಿತ ಬೇರೆ ಬೇರೆ ಕಡೆಗೂ ವ್ಯಾಪಿಸಿತ್ತು ಎಂದು ಹೇಳಿದರು.

ಕೇರಳದ ಕಾಸರಗೋಡು ಒಂದರಿಂದಲೇ ಅತ್ಯಲ್ಪಾವಧಿಯಲ್ಲಿ 1,329 ಸಿಮ್‌ಕಾರ್ಡ್‌ಗಳು ಮತ್ತು ಅವುಗಳಿಂದ ಕರೆಗಳು ದಾಖಲಾಗಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ಕರೆಯ ನಂಬರ್‌ ಮತ್ತು ಫೋಟೋ ಸಹಿತ ವಿಳಾಸ ಹೋಲಿಕೆ ಆಗುವ 373 ಜನರಿಗೆ ನೋಟಿಸ್‌ ಕೂಡ ನೀಡಲಾಗಿದೆ ಎಂದ ಅವರು, ವಾದ ಸಮರ್ಥಿಸುವ ಭರದಲ್ಲಿ ದುಷ್ಟ ಶಕ್ತಿಗಳಿಗೆ ಬೆಂಬಲ ನೀಡುವುದು ಸರಿ ಅಲ್ಲ. ನಮ್ಮ-ನಿಮ್ಮ ಮತ್ತು ಇಡೀ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಇದನ್ನು ನಾವು ನೋಡಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಗೋಲಿಬಾರ್‌ಗೂ ಮುನ್ನ ಲಾಠೀಚಾರ್ಜ್‌ ಮಾಡಲಾಯಿತು. 106 ಅಶ್ರುವಾಯು ಸಿಡಿಸಲಾಯಿತು. 47 ರಬ್ಬರ್‌ ಬುಲೆಟ್‌ ಬಳಸಲಾಯಿತು. 303 ರೈಫ‌ಲ್‌ನಿಂದ ಹತ್ತು ಬಾರಿ ಮತ್ತು ಎಸ್‌ಎಲ್‌ಆರ್‌ನಿಂದ 36 ಗುಂಡುಗಳನ್ನು ಗಾಳಿಯಲ್ಲಿ ಹಾರಿಸಲಾಯಿತು. ಆದಾಗ್ಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಯಾಕೆಂದರೆ ಕೃತ್ಯ ಪೂರ್ವಯೋಜಿತವಾಗಿತ್ತು. ಆ ಗುಂಪು ಯಾರ ನಿಯಂತ್ರಣದಲ್ಲೂ ಇರಲಿಲ್ಲ ಎಂದರು.

ಅಷ್ಟಕ್ಕೂ ಈ ಹಿಂದಿನ ಹಲವಾರು ಸರಕಾರಗಳಲ್ಲಿ ಗೋಲಿಬಾರ್‌ ಆಗಿರುವ ಉದಾಹರಣೆಗಳಿವೆ. ಆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ಅಥವಾ ಮ್ಯಾಜಿಸ್ಟ್ರೇಟ್‌ ತನಿಖೆಗೆ ಒಳಪಡಿಸಿದ್ದೂ ಇದೆ. ಕೆಲವು ವರ್ಷಗಳ ಹಿಂದೆ ಒಂದೇ ಸರಕಾರದ ಅವಧಿಯಲ್ಲಿ ಹಲವು ಬಾರಿ ಗೋಲಿಬಾರ್‌ ಆಗಿತ್ತು ಮತ್ತು 16 ಪ್ರಕರಣಗಳನ್ನು ನ್ಯಾಯಾಂಗ ತನಿಖೆ ವಹಿಸಲಾಗಿತ್ತು ಎಂದ ಸಚಿವರು, ಪ್ರಸ್ತುತ ಮಂಗಳೂರು ಗೋಲಿಬಾರ್‌ ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ ತನಿಖೆಗೆ ವಹಿಸಲಾಗಿದೆ. ಸಿಐಡಿ ತನಿಖೆ ಕೂಡ ನಡೆಯುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next