ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟೇಶ್ ಕುಮಾರ್ 2014ರ ಸೆ.12ರಂದು ಸೋಮೇಶ್ವರದಲ್ಲಿ 6 ಸೆಂಟ್ಸ್ ಜಾಗವನ್ನು 21 ಲ. ರೂ.ಗಳಿಗೆ ಖರೀದಿಸಿದ್ದರು. ಅದರ ಕ್ರಯಚೀಟಿ ದಾಖಲೆ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿತ್ತು. ಜಾಗ ಮಾರಾಟ ಮಾಡುವಾಗ ಆರೋಪಿಗಳಾದ ಕೆ. ರಾಘವೇಂದ್ರ ಹಾಗೂ ಕೆ. ಶಾಂತ ಜಾಗದಲ್ಲಿ ಯಾವುದೇ ರೀತಿಯ ಸಾಲ, ನ್ಯಾಯಾಲಯದ ಅಟ್ಯಾಚ್‌ಮೆಂಟ್ ಇರುವುದಿಲ್ಲ ಎಂದು ನಂಬಿಸಿದ್ದರು. ಆದರೆ ಆರೋಪಿಗಳು ರವೀಂದ್ರ ಎಂಬವರೊಂದಿಗೆ ಶಾಮೀಲಾಗಿ ಅಟ್ಯಾಚ್‌ಮೆಂಟ್‌ಗೆ ಒಪ್ಪಿಗೆ ನೀಡಿದ್ದು ಅದರಂತೆ ನ್ಯಾಯಾಲಯ ಅಟ್ಯಾಚ್ ಮೆಂಟ್ ಆದೇಶ ನೀಡಿದೆ.
ಆರೋಪಿಗಳಿಗೆ ಈ ಬಗ್ಗೆ ಗೊತ್ತಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಕ್ರಯಚೀಟಿಯನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿ ಜಾಗ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.