ಮಂಗಳೂರು : ನಗರದ ಮೋರ್ಗನ್ಸ್ ಸ್ಟ್ರೀಟ್ ಬಳಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವು ದೊರಕಿದ್ದು, ಮುಸ್ಲಿಂ ಮಹಿಳೆಯೊಬ್ಬಳು ಮತಾಂತರಕ್ಕೆ ಯತ್ನಿಸಿದ ಕಾರಣಕ್ಕೆ ಪತಿಯೇ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆಗೈದು ನೇಣಿಗೆ ಶರಣಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಮೂಲದವರಾದ ಪತಿ, ನಾಗೇಶ ಶೇರಿಗುಪ್ಪಿ(30), ವಿಜಯಲಕ್ಷ್ಮೀ (26) ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್ (4) ಸಾವನ್ನಪ್ಪಿದವರು.ಮೂವರಿಗೆ ವಿಷ ಉಣಿಸಿ ನಾಗೇಶ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಕಂಡು ಬಂದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಟಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನಾಗೇಶ್ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ನೂರ್ ಜಹಾನ್ ಎಂಬ ಮಹಿಳೆಯೊಂದಿಗೆ ಪತ್ನಿಗೆ ಜಾಸ್ತಿ ಸಂಪರ್ಕವಿತ್ತು, ಪತ್ನಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಯತ್ನ ಮಾಡಲಾಗಿತ್ತು ಎಂದು ಬರೆದಿದ್ದಾನೆ ಎಂದು ತಿಳಿಸಿದರು.
ನೂರ್ ಜಹಾನ್ ಳನ್ನು ವಶಕ್ಕೆ ಪಡೆಯಲಾಗಿದ್ದು, ಮತಾಂತರ ಯತ್ನ ನಡೆದಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ದಂಪತಿಗಳ ನಡುವೆ ಬಹಳ ದಿನಗಳಿಂದ ಸಾಕಷ್ಟು ಸಂಘರ್ಷ ಇತ್ತು, ಅಕ್ಟೋಬರ್ ತಿಂಗಳಿನಲ್ಲಿ ಆಕೆ ನಾಪತ್ತೆಯಾಗಿದ್ದಳು. ನಾಪತ್ತೆ ಪ್ರಕರಣವೂ ದಾಖಾಲಾಗಿತ್ತು. ನಾವೂ ಕೂಡ ಆಕೆಯ ತವರಿನ ಪ್ರದೇಶಗಳಲ್ಲೂ ಸಿಬ್ಬಂದಿಗಳನ್ನು ಕಳುಹಿಸಿ ಹುಡುಕಾಡಿದ್ದೆವು. ಕೆಲ ದಿನಗಳ ಬಳಿಕ ಆಕೆ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಗಂಡ ಕುಡಿದು ಬಂದು ಹಿಂಸೆ ನೀಡುತ್ತಿದ್ದ ಎಂದು ಹೇಳಿಕೊಂಡಿದ್ದಳು. ಮನ ಬದಲಾಯಿಸಿ ಮಕ್ಕಳ ಮುಖ ನೋಡಿ ಮತ್ತೆ ಆತನೊಂದಿಗೆ ಹೊಂದಾಣಿಕೆ ಮಾಡಿ ಬದುಕುತ್ತೇನೆ ಎಂದು ಹೇಳಿ ಪತಿ ನಾಗೇಶ್ ನೊಂದಿಗೆ ಇದ್ದಳು ಎಂದರು.
ನಾಗೇಶ್ ಚಾಲಕನಾಗಿದ್ದು, ವಿಜಯಲಕ್ಷ್ಮೀ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು.