Advertisement

ಐರೋಪ್ಯ ರಾಷ್ಟ್ರಗಳಿಗೆ ಮಂಗಳೂರು ಮೀನು; ಕುಳಾಯಿಯಲ್ಲಿ ರಫ್ತು ಘಟಕ

10:16 PM Oct 16, 2020 | mahesh |

ಮಹಾನಗರ: ಐರೋಪ್ಯ ರಾಷ್ಟ್ರ ಒಕ್ಕೂಟಗಳಿಗೆ ಮಂಗಳೂರಿನ ತಾಜಾ ಮೀನು ರಫ್ತು ಮಾಡುವ ಸಾಗರ ಉತ್ಪನ್ನ ರಫ್ತು ಘಟಕ ನಗರದ ಕುಳಾಯಿಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

Advertisement

ರಾಜ್ಯ ಸರಕಾರದ ಮೀನುಗಾರಿಕೆ ಇಲಾಖೆಯಿಂದ 12.50 ಕೋ.ರೂ., ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಟೈಸ್‌ ಯೋಜನೆಯಡಿ 12.50 ಕೋ.ರೂ ನೆರವು ಸೇರಿ ಒಟ್ಟು 25 ಕೋ.ರೂ. ವೆಚ್ಚದಲ್ಲಿ ಕುಳಾಯಿ-ಹೊಸಬೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಮೀನು ರಫ್ತು ಮಾಡುವ ಪ್ರತ್ಯೇಕ ಘಟಕ ನಿರ್ಮಾಣವಾಗಲಿದೆ. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವದ ನೆನಪಿ ಗಾಗಿ ಈ ಘಟಕ ಸ್ಥಾಪನೆಯಾಗಲಿದ್ದು, ಅವರೇ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಪ್ರತಿನಿತ್ಯ 30 ಟನ್‌ ಮೀನು ಸಂಸ್ಕರಣೆ ಮಾಡುವ ಸಾಮರ್ಥ್ಯದ ಘಟಕದಲ್ಲಿ ಒಟ್ಟು 1,000 ಟನ್‌ ಘನೀಕರಿಸಿದ ಮೀನನ್ನು ಶೇಖ ರಿಸಿ ಇಡುವ ಶಿಥಲೀಕೃತ ವ್ಯವಸ್ಥೆ ಇರಲಿದೆ.

ಏನಿರಲಿದೆ?
ನೂತನ ಸ್ಥಾವರದಲ್ಲಿ 3 ಟನ್‌ ಸಾಮ ರ್ಥ್ಯದ 3 ಬ್ಲಾಸ್ಟ್‌ ಫ್ರೀಝರ್‌, 1,600 ಕೆ.ಜಿ ಸಾಮರ್ಥ್ಯದ 1 ಪ್ಲೇಟ್‌ ಫ್ರೀಝರ್‌, 1,000 ಕೆ.ಜಿ. ಸಾಮರ್ಥ್ಯದ ಐಕ್ಯುಎಫ್‌ ಫ್ರೀಝರ್‌, ತಲಾ 500 ಟನ್‌ ಸಾಮರ್ಥ್ಯದ 2 ಕೋಲ್ಡ್‌ ಸ್ಟೋರೇಜ್‌, 30 ಟನ್‌ ಸಾಮರ್ಥ್ಯದ ಫ್ಲೆàಕ್‌ ಐಸ್‌ ಮೆಷಿನ್‌, ಮೀನು ಸಂಸ್ಕರಣೆ ಪೂರ್ವ ಸ್ಥಾವರ, ಮೀನು ಸಂಸ್ಕರಣೆ ಸ್ಥಾವರ, ತ್ಯಾಜ್ಯ ಸಂಸ್ಕರಣೆ ಸ್ಥಾವರ, ನೀರು ಶುದ್ಧೀಕರಣ ಘಟಕ, ಐರೋಪ್ಯ ರಾಷ್ಟ್ರ ಒಕ್ಕೂಟಗಳಿಗೆ ಮೀನು ರಫ್ತು ಮಾಡುವ ಪರವಾನಿಗೆ ಹೊಂದಲು ಅಗತ್ಯವಾದ ಪೂರಕ ಘಟಕ ಗಳನ್ನು ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವ ಸ್ಥಾಪಕ ನಿರ್ದೇಶಕ ಎಂ.ಎಲ್‌. ದೊಡ್ಡಮನಿ.

ಲಾಭವೇನು?
ಕುಳಾಯಿಯಲ್ಲಿ ನೂತನ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿದ್ದು, ಇದರ ಕಾಮಗಾರಿ ಪೂರ್ಣ ಗೊಂಡರೆ ಬೋಟ್‌ಗಳಿಂದ ಬರುವ ಮೀನನ್ನು ಸಮೀಪದಲ್ಲಿಯೇ ಆಗಲಿರುವ ರಫ್ತು ಘಟಕಕ್ಕೆ ತರಲು ಸುಲಭ. ಮೀನು ರಫ್ತು ಮಾಡಲು ಅವಕಾಶ ಇದ್ದರೂ ಕೆಲವು ಉದ್ದಿಮೆದಾರರಿಗೆ ಕಡಲ ಬದಿ/ಇತರ ಕಡೆಯಲ್ಲಿ ಭೂಮಿ ಲಭ್ಯವಿಲ್ಲ. ಜತೆಗೆ ಘಟಕ ನಿರ್ಮಾಣವೂ ದುಬಾರಿ. ಹೀಗಾಗಿ ಮೀನು ರಫ್ತು ಮಾಡಲು ಇಚ್ಛಿಸುವ ರಫ್ತುದಾರರು ಸರಕಾರದ ಈ ಘಟಕದಲ್ಲಿ ಸಂಸ್ಕರಣೆ ಮಾಡಿ ಕಳುಹಿಸಲು ಸಾಧ್ಯವಾಗಬಹುದು.

Advertisement

ಚೀನ, ಯುರೋಪ್‌, ಬ್ಯಾಂಕಾಕ್‌, ಥೈಲ್ಯಾಂಡ್‌, ಮಲೇಷ್ಯಾ, ಕೊರಿಯಾ ಸಹಿತ ಹಲವು ದೇಶಗಳಿಗೆ ರಾಜ್ಯದಿಂದ ಮೀನು ರಫ್ತು ಮಾಡಲಾಗುತ್ತದೆ. ಈ ಪೈಕಿ ಚೀನಕ್ಕೆ 1,000 ಕಂಟೈನರ್‌ ಮೀನು ರಫ್ತಾದರೆ, ಉಳಿದ ದೇಶಗಳಿಗೆ ಇಷ್ಟೇ ಪ್ರಮಾಣದ ಮೀನು ರಫ್ತಾಗುತ್ತದೆ. ಕಳೆದ ವರ್ಷ ವಿದೇಶಗಳಿಗೆ 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಸದ್ಯ ಕೊರೊನಾ ಕಾರಣ ದಿಂದ ರಫ್ತು ಕಡಿಮೆಯಾಗಿದೆ.

ಜೋಳದ ರೊಟ್ಟಿಗೆ ಸಿಗಡಿ ಚಟ್ನಿ: ಮೀನುಗಾರಿಕೆ ಕಾಲೇಜಿನ ಹೊಸ ಅನ್ವೇಷಣೆ
ಮಂಗಳೂರಿನ ಮೀನುಗಾರಿಕೆ ಕಾಲೇಜು ಇದೇ ಮೊದಲ ಬಾರಿಗೆ ಮೀನು ಸಂಬಂಧಿತ ಖಾದ್ಯವನ್ನು ಸಿದ್ಧಪಡಿಸಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಖಾದ್ಯ ಒಳಗೊಂಡ ಈ ಉತ್ಪನ್ನಕ್ಕೆ “ಮತ್ಸ್ಯ ಸಿರಿ ಖಾದ್ಯ’ ಎಂಬ ಹೆಸರಿಡಲಾಗಿದೆ. ಈ ಖಾದ್ಯವು ಉತ್ತರ ಕರ್ನಾಟಕದ ರಾಗಿ ರೊಟ್ಟಿ, ಜೋಳ ರೊಟ್ಟಿಯ ಪ್ಯಾಕ್‌, ಕರಾವಳಿ ಭಾಗದ ಸಿಗಡಿ ಚಟ್ನಿ, ಸಿಗಡಿ ಉಪ್ಪಿನಕಾಯಿ, ಮೀನಿನ ಚಿಪ್ಸ್‌ ಒಳಗೊಂಡಿದೆ. ಮೀನಿನಲ್ಲಿ ಪ್ರೋಟೀನ್‌, ರೊಟ್ಟಿಯಲ್ಲಿ “ಡಯಟರಿ ಫೈಬರ್‌’ ಇರುವುದರಿಂದ ಆರೋಗ್ಯಕ್ಕೆ ಉತ್ತಮ. ಸುಮಾರು 25 ರೂ.ಗೆ ಈ ಖಾದ್ಯ ದೊರೆಯುವ ನಿರೀಕ್ಷೆಯಿದ್ದು, ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದನ್ನು ಬಿಡುಗಡೆ ಮಾಡಲಿದ್ದಾರೆ. ಕಾಲೇಜು ಸಿದ್ಧಪಡಿಸಿದ ಈ ಖಾದ್ಯವನ್ನು ಕೆಎಫ್‌ಡಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಮಧ್ಯೆ ಮೀನಿನ ಚಿಪ್ಸ್‌ ಬಿಡುಗಡೆ ಮಾಡಿರುವ ಕೆಎಫ್‌ಡಿಸಿ ಮುಂದೆ ಮೀನಿನ ಚಕ್ಕುಲಿ, ಮೀನಿನ ಕೋಡುಬಳೆ ಉತ್ಪನ್ನಗಳ ಬಿಡುಗಡೆಗೂ ಸಿದ್ಧತೆ ಮಾಡಿದೆ.

ಶೀಘ್ರ ಅನುಷ್ಠಾನ
ಮೀನು ರಫ್ತು ಮಾಡುವ ಸಾಗರ ಉತ್ಪನ್ನ ರಫ್ತು ಘಟಕವನ್ನು ಮಂಗಳೂರಿನ ಕುಳಾಯಿಯಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ನೇತೃತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕರಾವಳಿಯ ಮೀನು ರಫ್ತು ಯೋಜನೆಗೆ ಸಹಕಾರ ನೀಡುವ ನೆಲೆಯಲ್ಲಿ ಸ್ಥಾಪನೆಯಾಗಲಿದೆ. ಶೀಘ್ರದಲ್ಲಿ ಇದರ ಅನುಷ್ಠಾನ ಪ್ರಕ್ರಿಯೆ ನಡೆಯಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next