Advertisement

ಮಂಗಳೂರು: ರೇಷನ್‌ ಕೃಪೆಯಲ್ಲಿ ಕುಡಿಯುವ ನೀರು

02:54 AM Apr 20, 2019 | Team Udayavani |

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಷನಿಂಗ್‌ ಎ. 18ರಂದು ಸಂಜೆ 6 ಗಂಟೆಯಿಂದ ಆರಂಭವಾಗಿದ್ದು, ಎ. 20ರ ಬೆಳಗ್ಗೆ 6 ಗಂಟೆಯ ವರೆಗೆ ನಗರದಲ್ಲಿ ನೀರು ಪೂರೈಕೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ 4 ದಿನ ನೀರು ಪೂರೈಕೆ ಮತ್ತು 2 ದಿನ ಇರುವುದಿಲ್ಲ.

Advertisement

ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ನೀರಿನ ರೇಷನಿಂಗ್‌ ನಡೆಸುತ್ತಿದೆ. ಬಿಸಿಲಿನ ಕಾರಣ ನೀರು ಆವಿಯಾಗುತ್ತಿದೆ. ಡ್ಯಾಂನಲ್ಲಿ ಶುಕ್ರವಾರ 5.37 ಅಡಿ ನೀರಿತ್ತು. ಪ್ರತಿದಿನ ನೀರು ಪೂರೈಕೆ ಮಾಡಿದರೆ, ಮೇಯಲ್ಲಿ ನೀರಿನ ಅಭಾವ ಕಾಡಲಿದೆ. ಹೀಗಾಗಿ ಎ. 11ರಿಂದಲೇ ನೀರಿನ ರೇಷನಿಂಗ್‌ ನಡೆಸಲು ಪಾಲಿಕೆ ಯೋಜಿಸಿತ್ತು. ಬಳಿಕ ನಿರ್ಧಾರ ಬದಲಿಸಿ ಚುನಾವಣೆ ಬಳಿಕ ಆರಂಭಿಸಲು ನಿರ್ಧರಿಸಿತ್ತು. ಅದರಂತೆ ಎ. 18ರ ಸಂಜೆ 6 ಗಂಟೆಯಿಂದ ರೇಷನಿಂಗ್‌ ಆರಂಭವಾಗಿದೆ.

48 ಗಂಟೆ ನೀರು ಸ್ಥಗಿತ
18ರ ಸಂಜೆ 6 ಗಂಟೆಗೆ ನೀರು ಸ್ಥಗಿತಗೊಂಡಿದ್ದು, 20ರಂದು ಬೆಳಗ್ಗೆ 6 ಗಂಟೆಗೆ ಮತ್ತೆ ಪೂರೈಕೆಯಾಗಲಿದೆ. ಅಂದರೆ 36 ಗಂಟೆ ನೀರು ಪೂರೈಕೆ ಸ್ಥಗಿತಗೊಂಡಂತಾಗುತ್ತದೆ. ಮೊದಲ ರೇಷನಿಂಗ್‌ನಲ್ಲಿ 36 ಗಂಟೆಯಷ್ಟೇ ನೀರು ಸ್ಥಗಿತಗೊಳಿಸಲಾಗಿದೆ. ಮುಂದೆ 48 ಗಂಟೆಗೆ ವಿಸ್ತರಿಸಲಾಗುತ್ತದೆ ಎಂದು ಪಾಲಿಕೆಯ ಎಂಜಿನಿಯರ್‌ ಲಿಂಗೇಗೌಡ ತಿಳಿಸಿದ್ದಾರೆ.

ಮೇ 14ರ ವರೆಗೆ ಮುಂದುವರಿಕೆ
ವಾರದಲ್ಲಿ 96 ಗಂಟೆ ನೀರು ಪೂರೈಕೆ ಮಾಡಿ 48 ಗಂಟೆ ಸ್ಥಗಿತ ಪ್ರಕ್ರಿಯೆ ಮೇ 14ರ ವರೆಗೆ ಮುಂದುವರಿಯಲಿದೆ. ಮಳೆ ಬಂದು ನೀರಿನ ಪ್ರಮಾಣ ಹೆಚ್ಚಾದರೆ ಹೆಚ್ಚಾದಲ್ಲಿ ನೀರು ಪೂರೈಕೆ ನಿರಂತರವಾಗಿ ಇರಲಿದೆ. ಇಲ್ಲವಾದಲ್ಲಿ ಈಗಿನ ರೇಷನಿಂಗ್‌ ಪ್ರಕ್ರಿಯೆ ಮತ್ತೆ ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಿತ ಬಳಕೆ ಮಾಡಿ

– ಡ್ಯಾಂನಲ್ಲಿ ನೀರಿನ ಮಟ್ಟ ತಗ್ಗುತ್ತಿದೆ. ನೀರಿನ ಉಳಿತಾಯ ಈ ಹೊತ್ತಿನ ಅಗತ್ಯ. ಹಾಗಾಗಿ ನೀರು ಪೋಲು ಮಾಡದಿರಿ.
– ವಾಹನಗಳನ್ನು ತೊಳೆಯಲು ಬೇಕಾಬಿಟ್ಟಿ ನೀರು ಬಳಸದಿರಿ.
– ಸ್ನಾನಕ್ಕೆ, ಬಟ್ಟೆ ಒಗೆಯಲು ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡದಿರಿ. ಬಟ್ಟೆ ತೊಳೆದ ಅನಂತರ ಬಕೆಟ್‌ನಲ್ಲಿ ಉಳಿದ ನೀರನ್ನು ಚೆಲ್ಲದೆ, ಗಿಡಗಳಿಗೆ ಉಪಯೋಗಿಸಿ. ಇದರಿಂದ ಗಿಡಗಳಿಗೆ ಪ್ರತ್ಯೇಕ ನೀರು ಬಿಡುವುದು ತಪ್ಪುತ್ತದೆ.
– ನಲ್ಲಿಯಿಂದ ನೀರು ಸೋರಿಕೆಯಾಗದಂತೆ ಎಚ್ಚರ ವಹಿಸಿ.

ಉಡುಪಿ: 3 ದಿನಕ್ಕೊಮ್ಮೆ ಸರಬರಾಜು

ಬಜೆ ಡ್ಯಾಂ ನೀರಿನ ಮಟ್ಟ 2.74 ಅಡಿಉಡುಪಿ: ನಗರದಲ್ಲಿ ಈ ಹಿಂದಿನಂತೆಯೇ ಮೂರು ದಿನಕ್ಕೊಮ್ಮೆ ನೀರು ನೀಡಲಾಗುವುದು ಎಂದು ನಗರಸಭೆ ತಿಳಿಸಿದೆ. ಸ್ವರ್ಣ ನದಿಗೆ ಕಟ್ಟಲಾದ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಕುಗ್ಗುತ್ತಿದೆ. ಇಲ್ಲಿ ಶುಕ್ರವಾರ ನೀರಿನ ಮಟ್ಟ 2.74 ಅಡಿಯಷ್ಟಿತ್ತು. ಹಿಂದಿನಂತೆಯೇ 3 ದಿನಕ್ಕೊಮ್ಮೆ ನೀರು ನೀಡಲಾಗುವುದು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಲವೆಡೆ ರಾತ್ರಿ ಹೊತ್ತು ನೀರು ಬಿಡಲಾಗುತ್ತಿದೆ ಎಂದು ಉಡುಪಿ ನಗರಸಭೆಯ ಎಂಜಿನಿಯರ್‌ ಗಣೇಶ್‌ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next