Advertisement

ಲಾಕ್‌ಡೌನ್‌ ಸಂಕಷ್ಟದಲ್ಲೂ ಲಕ್ಷದ್ವೀಪ ನಿವಾಸಿಗಳ ಕೈ ಬಿಡದ ಮಂಗಳೂರು

02:17 AM May 12, 2020 | Sriram |

ಮಂಗಳೂರು: ಅಗತ್ಯ ವಸ್ತುಗಳೂ ಸೇರಿದಂತೆ ಬಹುತೇಕ ಎಲ್ಲ ಸಾಮಗ್ರಿಗಳಿಗೆ ಮಂಗಳೂರು ಮತ್ತು ಕೇರಳದ ಬಂದರನ್ನು ಅವಲಂಬಿಸಿಕೊಂಡಿರುವ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಕೋವಿಡ್-19 ಲಾಕ್‌ಡೌನ್‌ ವೇಳೆಯೂ ಮಂಗಳೂರು ಹಳೆ
ಬಂದರಿನ ಮೂಲಕ ನಿರಂತರ ಅಗತ್ಯ ವಸ್ತುಗಳ ಪೂರೈಕೆಯಾಗಿದೆ.

Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಒಳಗೊಂಡಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಕನಿಷ್ಠ ಕಾರ್ಮಿಕರನ್ನು ಬಳಸಿಕೊಂಡು ನೌಕೆಗಳಲ್ಲಿ ಅಕ್ಕಿ, ತರಕಾರಿ ಮೊದಲಾದ ಆಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಸಾಮಾನ್ಯವಾಗಿ ಲಕ್ಷದ್ವೀಪ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದುಅಗತ್ಯ ವಸ್ತುಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಲಾಕ್‌ಡೌನ್‌ ಆರಂಭವಾದ ತತ್‌ಕ್ಷಣ ಹಡಗು ಸಂಚಾರವನ್ನು ಕೂಡ ಸ್ಥಗಿತ ಗೊಳಿಸಲು ಜಿಲ್ಲಾಡಳಿತ ಸೂಚಿಸಿತ್ತು. ಆದರೆ ನೌಕೆ, ಬಾರ್ಜ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.
ಲಾಕ್‌ಡೌನ್‌ ಆರಂಭದಲ್ಲಿ ಸಿಮೆಂಟ್‌, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನೂ ಕ‌ಳುಹಿಸಿಕೊಡಲಾಗಿದೆ. ಪ್ರಸ್ತುತ ಕಾರ್ಮಿಕರ ಕೊರತೆಯಿಂದ ಕಟ್ಟಡ ಸಾಮಗ್ರಿ ಸಾಗಿಸುವ 10 ನೌಕೆಗಳು ಲಕ್ಷದ್ವೀಪಕ್ಕೆ ತೆರಳುತ್ತಿಲ್ಲ.

ಮೇ 15ಕ್ಕೆ ಅಂತ್ಯ
ಲಕ್ಷದ್ವೀಪಕ್ಕೆ ಎಲ್ಲ ಸರಕುಗಳನ್ನು ಸಾಗಿಸಲು ಮೇ 15 ಕೊನೆಯ ದಿನಾಂಕ. ಮತ್ತೆ ಲಕ್ಷದ್ವೀಪ- ಮಂಗಳೂರಿನ ವ್ಯವಹಾರ ಆರಂಭವಾಗುವುದು ಸೆಪ್ಟಂಬರ್‌ 15ರ ಅನಂತರವೇ.

2,000 ಟನ್‌ ಅಕ್ಕಿ, 250 ಟನ್‌ ಸಕ್ಕರೆ
ಲಾಕ್‌ಡೌನ್‌ ವೇಳೆಯೂ ಬಂದರು ಕಚೇರಿ ನಿರಂತರವಾಗಿ ಕಾರ್ಯನಿರ್ವಹಿಸಿದೆ. ನಿಗದಿತ ಪ್ರಮಾಣದ ಸಾಮಗ್ರಿ ರವಾನೆ ಸಾಧ್ಯವಾಗದಿದ್ದರೂ ಗರಿಷ್ಠ ಸೇವೆ ಒದಗಿಸಲಾಗಿದೆ. ಆಹಾರ ನಿಗಮದ ಗೋದಾಮಿನಿಂದ 2,000 ಟನ್‌ಗಿಂತಲೂ ಅಧಿಕ ಅಕ್ಕಿ ಹಾಗೂ 250 ಟನ್‌ ಸಕ್ಕರೆಯನ್ನು ಲಕ್ಷದ್ವೀಪಕ್ಕೆ ಕಳುಹಿಸಿಕೊಡಲಾಗಿದೆ. 400 ಟನ್‌ನಷ್ಟು ಇತರ ಆಹಾರ ಸಾಮಗ್ರಿಗಳು ರವಾನೆಯಾಗಿವೆ ಎನ್ನುತ್ತಾರೆ ಗುತ್ತಿಗೆದಾರರು ಹಾಗೂ ಬಂದರು ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next