ಮಂಗಳೂರು : ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಮಗುಚಿ ಆರು ಮಂದಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಮೃತದೇಹಗಳನ್ನು ಬೊಕ್ಕಪಟ್ಣ ನಿವಾಸಿಗಳಾದ ಪ್ರೀತಂ ((25) ಹಾಗೂ ಪಾಂಡುರಂಗ(58) ಎಂದು ಗುರುತಿಸಲಾಗಿದೆ.
ಇನ್ನುಳಿದ ನಾಲ್ಕು ಮಂದಿಯ ದೇಹಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಘಟನೆ ವಿವರ : ಹೊಸಬೆಟ್ಟು ಮೂಲದ ಮತ್ಸೋದ್ಯಮಿಗೆ ಸೇರಿದ ಶ್ರೀರಕ್ಷಾ ಬೋಟ್ ದುರಂತಕ್ಕೀಡಾಗಿದ್ದು. ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಸೋಮವಾರ ತಡರಾತ್ರಿ ಮೀನುಗಾರಿಕಾ ಬಂದರಿಗೆ ಆಗಮಿಸಬೇಕಿತ್ತು, ಆದರೆ ಇಂದು ಮುಂಜಾನೆಯವರೆಗೆ ಬೋಟ್ ವಾಪಸ್ಸು ಧಕ್ಕೆ ತಲುಪದೇ ಇದ್ದಾಗ ಬೋಟ್ ನೋಡಿಕೊಳ್ಳುವ ರೈಟರ್ ಮೀನುಗಾರರಿಗೆ ಕರೆ ಮಾಡಿದ್ದು ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಕ್ಷಣವೇ ಬೋಟಿನ ವಯರ್ ಲೆಸ್ ಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ಇದ್ದಾಗ ಇತರ ಮೀನಗಾರಿಕಾ ಬೋಟ್ ನವರಿಗೆ ಮಾಹಿತಿ ನೀಡಿ ಬೋಟ್ ನಾಪತ್ತೆಯಾದ ಕುರಿತು ತಿಳಿಸಿದ ಪರಿಣಾಮ ಪರ್ಸೀನ್ ಬೋಟ್ ಗಳು, ಕರಾವಳಿ ರಕ್ಷಣೆ ಪಡೆ ಬೋಟ್ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು.
ಸತತ ಕಾರ್ಯಾಚರಣೆಯ ಮೂಲಕ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು ನಾಪತ್ತೆಯಾದ ನಾಲ್ವರ ರಕ್ಷಣಾ ಕಾರ್ಯ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಮುಳುಗು ತಜ್ಞರು: ಬೋಟ್ ಮುಳುಗಿದೆ ಎಂದು ಶಂಕೆ ವ್ಯಕ್ತವಾಗಿರುವ ಆಳ ಸಮುದ್ರಕ್ಕೆ ಮುಳುಗು ತಜ್ಞರು ಆಗಮಿಸಿದ್ದುಕಾರ್ಯಾಚರಣೆ ಮುಂದುವರೆದಿದೆ. ಸ್ಥಳೀಯ ಪರ್ಸೀನ್ ಬೋಟ್ ಗಳಲ್ಲಿ ಮೀನುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ನಾಪತ್ತೆಯಾದ ಮೀನುಗಾರರು:
ಚಿಂತನ್ ಬೊಕ್ಕಪಟ್ಣ(21) ಹಸೈನಾರ್ ಕಸ್ಬಾ ಬೆಂಗರೆ(25) ಅನ್ಸಾರ್ ಕಸ್ಬಾ ಬೆಂಗ್ರೆ(31) ಜಿಯಾವುಲ್ಲಾ ಕಸ್ಬಾ ಬೆಂಗ್ರೆ(32)