Advertisement

ಮಂಗಳೂರು: ಆಟೋ ಬೇಡಿಕೆ; ಮತ್ತೆ ಹೋರಾಟದ ಕೂಗು

09:49 AM Oct 13, 2022 | Team Udayavani |

ಮಹಾನಗರ: ಆಟೋ ರಿಕ್ಷಾ ಸಂಘಟನೆಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಆಗ್ರಹ ಇದೀಗ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣಿಸಿದ್ದು, ಹತ್ತು ದಿನಗಳಲ್ಲಿ ಈ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ, ಹೋರಾಟದ ಹಾದಿ ಹಿಡಿಯುವ ಕುರಿತು ಆಟೋ ಸಂಘಟನೆಗಳು ನಿರ್ಧರಿಸಿವೆ.

Advertisement

ಬ್ಯಾಟರಿ ಚಾಲಿತ ಆಟೋಗಳಿಗೂ ಪರ್ಮಿಟ್‌ ಕಡ್ಡಾಯ ಮಾಡಬೇಕು ಎನ್ನುವುದು ಸದ್ಯ ಆಟೋ ಸಂಘಟನೆಗಳ ಪ್ರಮುಖ ಬೇಡಿಕೆ. ಈ ಕುರಿತಂತೆ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಬೇಡಿಕೆ ಈಡೇರಿಲ್ಲ. ಕೆಲವರು ಪರ್ಮಿಟ್‌ ಇರುವ ರಿಕ್ಷಾಗಳನ್ನು ಮಾರಾಟ ಮಾಡಿ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುತ್ತಿದ್ದಾರೆ. ಒಬ್ಬನೇ ಹಲವು ಇ-ಆಟೋಗಳನ್ನು ಖರೀದಿಸಿ ಬಾಡಿಗೆಗೆ ಕೊಟ್ಟಿರುವ ಉದಾಹರಣೆಗಳಿವೆ. ಇದರಿಂದ ಆಟೋಗಳ ಸಂಖ್ಯೆಯು ಏರಿಕೆಯಾಗಿವೆ. ಅಲ್ಲದೆ ಚಾಲಕರ ಬಾಡಿಗೆಗೂ ಹೊಡೆತಬಿದ್ದಿದೆ ಎನ್ನುವುದು ಸಂಘಟನೆಯ ಪ್ರಮುಖರ ಮಾತು.

ಆಟೋ ಸ್ಟ್ಯಾಂಡ್ ಹೆಚ್ಚಿಸಬೇಕು

2009-10ರಲ್ಲಿ ಸಂಚಾರಿ ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ರಿಕ್ಷಾ ಸಂಘಟನೆಗಳು ಸೇರಿ ನಗರದ ಆಟೋ ಸ್ಟ್ಯಾಂಡ್ ಗಳ ಬಗ್ಗೆ ಸರ್ವೇ ಮಾಡಲಾಗಿತ್ತು. 540ರ ವರೆಗೆ ಪಾರ್ಕ್‌ ಗಳನ್ನು ನಿರ್ಮಿಸ ಬಹುದು ಎಂದು ಸರ್ವೇಯಲ್ಲಿ ತಿಳಿದು ಬಂದಿತ್ತು.

ಆಗ ನಗರದಲ್ಲಿ 5,686 ಆಟೋಗಳು ಮಾತ್ರ ಇದ್ದ ಕಾರಣ, ಪ್ರಾಧಿಕಾರದಿಂದ 241 ಪಾರ್ಕ್‌ಗಳಿಗೆ ಅನುಮತಿ ಸಿಕ್ಕಿತ್ತು. ಸದ್ಯ 7 ಸಾವಿರಕ್ಕೂ ಅಧಿಕ ಆಟೋಗಳು ನಗರದಲ್ಲಿವೆ. 241 ಪಾರ್ಕ್‌ ಸಾಕಾಗುತ್ತಿಲ್ಲ. ಪಾಲಿಕೆಯಲ್ಲಿ 2 ತಿಂಗಳುಗ ಳ ಹಿಂದೆ ನಡೆದ ಸಭೆಯಲ್ಲಿ 500ರಷ್ಟು ಪಾರ್ಕ್‌ಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮಂಗಳೂರು ನಗರ ಆಟೋ ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಗೌರವ ಸಲಹೆಗಾರ ಅರುಣ್‌ ಕುಮಾರ್‌.

Advertisement

ಬೇನಾಮಿ ಆಟೋ ಸಂಚಾರ

ಬೇನಾಮಿ ಆಟೋಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಬೇರೆಯವರ, ಸ್ಟಾಪ್‌ಗೆ ಹೋದ ಆಟೋಗಳ ವಲಯ ಸಂಖ್ಯೆಗಳನ್ನು ಹಾಕಿ ಓಡಿಸಲಾಗುತ್ತಿದೆ. ಅವುಗಳನ್ನು ವಶಪಡಿಸಬೇಕು. ಆಟೋಗಳ ಎದುರು, ಹಿಂದೆ ರಿಫ್ಲೆಕ್ಟಿವ್‌ ಸ್ಟಿಕ್ಕರ್‌ ಅಳವಡಿಕೆ ಕುರಿತ ಕೇಂದ್ರ ಸಾರಿಗೆ ಇಲಾಖೆಯ ಸೂಚನೆಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸುಪ್ರೀಂ ಕೋರ್ಟ್‌ ಸ್ಟಿಕ್ಕರ್‌ ಅಳವಡಿಸದಂತೆ ಸೂಚನೆ ನೀಡಿದ್ದರೆ, ಕೇಂದ್ರ ಸರಕಾರ ಸಾವಿರಾರು ರೂಪಾಯಿ ವೆಚ್ಚದ ಈ ಸ್ಟಿಕ್ಕರ್‌ಗಳನ್ನು ಅಳವಡಿಸಲು ಹೇಳುತ್ತಿದೆ. ಇದನ್ನು ವಿರೋಧಿಸುತ್ತೇವೆ ಎನ್ನುವುದು ಸಂಘದ ಪ್ರಮುಖ ವಿಷ್ಣುಮೂರ್ತಿಯವರ ಮಾತು.

ಪ್ರಯಾಣ ದರ ಪರಿಷ್ಕರಣೆ ?

ಜಿಲ್ಲೆಯಲ್ಲಿ ಸುಮಾರು ಒಂದೂವರೆ ವರ್ಷಗಳ ಬಳಿಕ ಆಟೋ ಪ್ರಯಾಣ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಹಲವು ಸಮಯದಿಂದ ದರ ಪರಿಷ್ಕರಣೆಗೆ ಸಂಘಟನೆಗಳು ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಕಳೆದ ತಿಂಗಳು ಉಡುಪಿಯಲ್ಲಿ ದರ ಪರಿಷ್ಕರಣೆಯಾಗಿದ್ದು, ಜಿಲ್ಲೆಯಲ್ಲೂ ದರ ಪರಿಷ್ಕರಿಸುವಂತೆ ಬೇಡಿಕೆ ಹೆಚ್ಚಾಗಿದೆ. ಸದ್ಯ 2020 ಎ. 1ರಂದು ಈ ದರ ಜಾರಿಗೆ ಬಂದಂತೆ ಆಟೋ ಮೀಟರ್‌ ಕನಿಷ್ಠ ದರ 1.5 ಕಿ.ಮೀ.ಗೆ 30 ರೂ.ಇದೆ. ಉಡುಪಿಯಲ್ಲಿ ಈ ದರವನ್ನು 40 ರೂ.ಗೆ ಏರಿಸಿದ್ದು, ಅನಂತರದ ಪ್ರತಿ ಕಿ.ಮೀ.ಗೆ 20 ರೂ. ದರ ನಿಗದಿ ಮಾಡಲಾಗಿದೆ. ಮಂಗಳೂರಿನಲ್ಲೂ ಇದೇ ಮಾದರಿಯಲ್ಲಿ ದರ ನಿಗದಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರಿಗೆ ಮತ್ತೂಂದು ದರ ಹೆಚ್ಚಳದ ಬರೆ ಬೀಳುವ ಸಾಧ್ಯತೆಯಿದೆ.

ಇಂದು ಕುಂದು- ಕೊರತೆ ಸಭೆ

ಆಟೋ ರಿಕ್ಷಾ ಚಾಲಕ- ಮಾಲಕರ ಕುಂದುಕೊರತೆಯ ಬಗ್ಗೆ ಚರ್ಚಿಸಲು ವಿಶೇಷ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಅ. 13ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. -ರವಿಶಂಕರ್‌ ಪಿ., ಪ್ರಾದೇಶಿಕ ಸಾರಿಗೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next