ಮಂಗಳೂರು: ಉದಯವಾಣಿ ನಡೆಸುವ ಸ್ಪರ್ಧೆಗಳಲ್ಲಿ ಓದುಗರು ಆಸಕ್ತಿಯಿಂದ ಭಾಗವಹಿಸುವುದು ಪತ್ರಿಕೆಯ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ. ಓದುಗರ ಈ ಪ್ರೀತಿಗೆ ಸಂಸ್ಥೆ ಆಭಾರಿ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ ಅವರು ಹೇಳಿದರು.
ಲೇಡಿಹಿಲ್ ಮಂಗಳಾ ಈಜುಕೊಳದ ಮುಂಭಾಗದಲ್ಲಿರುವ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನಲ್ಲಿ ನಡೆದ ಉದಯವಾಣಿ-ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಲೇಡಿಹಿಲ್ ಮಂಗಳೂರು ಪ್ರಾಯೋಜಕತ್ವದ `ಉದಯವಾಣಿ – ಎಸ್.ಎಲ್. ಶೇಟ್ ಡೈಮಂಡ್ ಹೌಸ್- ದೀಪಾವಳಿ ಧಮಾಕಾ 2019’ರ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಶನಿವಾರ ಮುಖ್ಯ ಅತಿಥಿಯಾಗಿದ್ದರು.
ಪ್ರಸ್ತುತ ನಾವು ಧಾವಂತದ ಜೀವನ ಅನುಸರಿಸುತ್ತಿದ್ದೇವೆ. ಯಾವುದೇ ಲೇಖನ, ಬರಹಗಳನ್ನು ಸಂಪೂರ್ಣವಾಗಿ ಓದಿ ಮುಗಿಸುವ ತಾಳ್ಮೆ ಬಹುತೇಕರಿಗೆ ಇಲ್ಲ. ಇಂತಹ ಸಂದರ್ಭದಲ್ಲಿಯೂ ಉದಯವಾಣಿ ಪತ್ರಿಕೆ, ವಿಶೇಷಾಂಕಗಳನ್ನು ಸಂಪೂರ್ಣವಾಗಿ ಓದಿ, ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಓದುಗರಿಗೆ ಪತ್ರಿಕೆ ಮೇಲಿರುವ ಪ್ರೀತಿಯೇ ಕಾರಣ ಎಂದವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಮಾತನಾಡಿ, ದೀಪಾವಳಿ ಧಮಾಕಾದ ಮೂಲಕ ಪತ್ರಿಕೆಯು ಓದುಗರಿಗೆ ಹೆಚ್ಚು ಅವಕಾಶ ಕಲ್ಪಿಸುತ್ತಿದೆ. ಅಲ್ಲದೆ, ಅಧಿಕ ಮಂದಿ ಓದುಗರನ್ನು ತಲುಪಲು ಇದರಿಂದ ಸಾಧ್ಯವಾಗಿದೆ. ಪತ್ರಿಕೆಯೊಂದಿಗೆ ಓದುಗರ ಬಾಂಧವ್ಯ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಲೇಡಿಹಿಲ್ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ವ್ಯವಸ್ಥಾಪಕ ಪಾಲುದಾರ ರವೀಂದ್ರ ಎಂ. ಶೇಟ್ ಅವರು ಮಾತನಾಡಿ, ನಮ್ಮ ಸಂಸ್ಥೆ ಮತ್ತು ಉದಯವಾಣಿಯದ್ದು 50 ವರ್ಷಗಳ ಬಾಂಧವ್ಯ. ಪತ್ರಿಕೆ ಆರಂಭವಾದಂದಿನಿಂದಲೇ ಸಂಸ್ಥೆಯ ಜಾಹೀರಾತು, ಸುದ್ದಿಗಳಿಗೆ ಉದಯವಾಣಿಯೇ ಜೀವಾಳ. ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸಿದರು.
ಲೇಡಿಹಿಲ್ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಪಾಲುದಾರರಾದ ಶರತ್ ಶೇಟ್, ಪ್ರಸಾದ್ ಶೇಟ್, ದೀಪ್ತಿ ಶರತ್ ಶೇಟ್ ಉಪಸ್ಥಿತರಿದ್ದರು.
ಮ್ಯಾಗಜಿನ್ ಮತ್ತು ಸ್ಪೆಷಲ್ ಇನೀಶಿಯೇಟಿವ್ಸ್ ನ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಸ್ವಾಗತಿಸಿದರು. ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ಬಹುಮಾನಿತರ ಪಟ್ಟಿ ವಾಚಿಸಿದರು. ಪುರವಣಿ ವಿಭಾಗ ಮುಖ್ಯಸ್ಥ ಪೃಥ್ವಿರಾಜ್ ಕವತ್ತಾರು ವಂದಿಸಿದರು. ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರಪ್ರಸಾದ್ ನಿರೂಪಿಸಿದರು.