ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ 10 ದಿನಗಳ ಕಾಲ ಜರಗಿದ ಮಂಗಳೂರು ದಸರಾ ಉತ್ಸವವು ರವಿವಾರ ಮುಂಜಾನೆ ದೇವರ ವಿಗ್ರಹಗಳ ಜಲಸ್ತಂಭನದ ಮೂಲಕ ಸಂಪನ್ನಗೊಂಡಿತು. ಶ್ರೀ ಕ್ಷೇತ್ರದಿಂದ ಶನಿವಾರ ಸಂಜೆ ಹೊರಟ ಆಕರ್ಷಕ ಶೋಭಾಯಾತ್ರೆಯು ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ದೂರ ಸಾಗಿದ್ದು, ರವಿವಾರ ಮುಂಜಾನೆ ಕ್ಷೇತ್ರಕ್ಕೆ ಮರಳಿ ಸಂಪನ್ನಗೊಂಡಿತು.
ಮೆರವಣಿಗೆ ವೇಳೆ ಅನೇಕ ಕಲಾತಂಡಗಳ ವಿವಿಧ ಸಾಂಸ್ಕೃತಿಕ ವೈಭವಗಳು, ಸ್ತಬ್ಧಚಿತ್ರ, ಹುಲಿವೇಷ ಕುಣಿತ ಮುಂತಾದ ಸುಮಾರು 65ಕ್ಕೂ ಅಧಿಕ ಟ್ಯಾಬ್ಲೋ ಮತ್ತು ವೇಷಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು. ಮೆರವಣಿಗೆ ಆರಂಭದಿಂದ ಕೊನೆತನಕವೂ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದುದು ಈ ಬಾರಿಯ ವಿಶೇಷ.
ದಸರಾದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಶ್ರೀ ನಾರಾಯಣ ಗುರು, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ ಕಾಳ ರಾತ್ರಿ(ಮಹಾಕಾಳಿ), ಮಹಾಗೌರಿ, ಸಿದ್ಧಿ ದಾತ್ರಿ, ಶಾರದಾ ವಿಗ್ರಹಗಳ ಜತೆಗೆ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ಸೌಂದರ್ಯವನ್ನು ಹೆಚ್ಚಿಸಿದ್ದವು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿ ಮೆರವಣಿಗೆಯ ಯಶಸ್ಸಿಗೆ ಸಹಕರಿಸಿದ್ದರು.
ದಸರಾ ಮೆರವಣಿಗೆಯಲ್ಲಿ ಹುಲಿವೇಷ ಪ್ರಮುಖವಾಗಿದ್ದು, ಈ ಬಾರಿ ಸುಷ್ಮಾ ರಾಜ್ ಅವರು ಹುಲಿ ವೇಷ ಹಾಕಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ವಿವಿಧೆಡೆಗಳಲ್ಲಿ ಪಾನೀಯ, ಅವಲಕ್ಕಿ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.