Advertisement

ಮಂಗಳೂರು ದಸರಾ ವೈಭವದ ಶೋಭಾಯಾತ್ರೆ

06:05 AM Oct 01, 2017 | Team Udayavani |

ಮಂಗಳೂರು: ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸಿ ವಿಜೃಂಭಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ಶನಿವಾರ ಸಂಜೆ ಆರಂಭಗೊಂಡು ರವಿವಾರ ಮುಂಜಾನೆ ಸಂಪನ್ನಗೊಂಡಿತು.

Advertisement

ಕ್ಷೇತ್ರದಿಂದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಗಳ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ಹೊರಟು ಕಂಬಾÛ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಸರ್ಕಲ್‌, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆಯಾಗಿ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಿತು. ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ಸಾಗಿತು.

ಗಣ್ಯರ ಉಪಸ್ಥಿತಿ
ಶೋಭಾಯಾತ್ರೆ ಆರಂಭಕ್ಕೆ ಮೊದಲು ಶ್ರೀ ಶಾರದೆಯ ಸನ್ನಿಧಿಯಲ್ಲಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಹಲವು ಮಂದಿ ಸೇವಾಕರ್ತರನ್ನು ಸಮ್ಮಾನಿಸಿದರು. ಸಚಿವ ಯು.ಟಿ. ಖಾದರ್‌, ಶಾಸಕ ಜೆ.ಆರ್‌. ಲೋಬೋ, ವಿಧಾನಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ, ಕುದ್ರೋಳಿ ಕ್ಷೇತ್ರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ ಸಿ. ಸುವರ್ಣ, ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್‌ ಆರ್‌, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ರವಿಶಂಕರ್‌ ಮಿಜಾರು, ಕಳ್ಳಿಗೆ ತಾರಾನಾಥ ಶೆಟ್ಟಿ, ವಿಜಯಕುಮಾರ್‌ ಸೊರಕೆ, ಲೀಲಾಕ್ಷ ಕರ್ಕೇರ, ಕದ್ರಿ ನವನೀತ ಶೆಟ್ಟಿ, ನವೀನ್‌ ಡಿ’ಸೋಜಾ, ಎಂ. ಶಶಿಧರ್‌ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶೋಭಾಯಾತ್ರೆಯ ಸಾಂಸ್ಕೃತಿಕ ಮೆರುಗು
ಮಂಗಳೂರು ದಸರಾದ ಶೋಭಾಯಾತ್ರೆಗೆ ವಿವಿಧ ಸಂಘ-ಸಂಸ್ಥೆಗಳ ಪ್ರವರ್ತಿತ ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿ ವೇಷ, ನೃತ್ಯ ರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋ ಗಳು, ತೃಶ್ಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆ  ವಾದ್ಯ, ಕಲ್ಲಡ್ಕ ಶಿಲ್ಪಾ ಗೊಂಬೆ, ಬೆಂಗ ಳೂರಿನ ಬ್ಯಾಂಡ್‌ ತಂಡ, ಸಾಗರದ ಬೂಜಪ್ಪ ಬಳಗದ ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತಗಳು, ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವೈವಿಧ್ಯ ಮಯ ಸುಮಾರು 65ಕ್ಕೂ ಅಧಿಕ ಟ್ಯಾಬ್ಲೋ ಗಳು ಮೆರವಣಿಗೆಗೆ ಮೆರುಗು ನೀಡಿದವು.

ಭಕ್ತರ ಸಹಕಾರದಿಂದಲೇ ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸರ್ವಧರ್ಮದ ಸಂದೇಶದನ್ವಯ ಕ್ಷೇತ್ರದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ದಸರಾಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ.
– ಬಿ. ಜನಾರ್ದನ ಪೂಜಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next