Advertisement
ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರಾಡಳಿತ ಮಂಡಳಿಯ ಪರವಾಗಿ ಸಮ್ಮಾನಿಸಲಾಯಿತು. ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಪ್ರಮುಖರಾದ ಜಯ ಸಿ. ಸುವರ್ಣ, ಚಂದ್ರಶೇಖರ್, ಎಚ್.ಎಸ್. ಸಾಯಿರಾಂ, ಪದ್ಮರಾಜ್ ಆರ್., ಮಾಧವ ಸುವರ್ಣ, ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ದೀಪಕ್ ಪೂಜಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ ಉಪಸ್ಥಿತರಿದ್ದರು.
Related Articles
ಜನಾರ್ದನ ಪೂಜಾರಿ ಅವರ ಉಪಸ್ಥಿತಿ ಯೊಂದಿಗೆ ಪ್ರತೀ ವರ್ಷ ಶೋಭಾಯಾತ್ರೆ ಆರಂಭಗೊಳ್ಳುತ್ತದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ದಸರಾ ಮೆರವಣಿಗೆ ಆರಂಭ ವೇಳೆ ಉಪಸ್ಥಿತರಿರಲಿಲ್ಲ. ಮಂಗಳವಾರ ಮಧ್ಯಾಹ್ನದವರೆಗೆ ಕುದ್ರೋಳಿ ಕ್ಷೇತ್ರದಲ್ಲಿದ್ದು ಮೇಲುಸ್ತುವಾರಿ ನೋಡಿಕೊಂಡ ಅವರು ಬಳಿಕ ಕ್ಷೇತ್ರದಿಂದ ತೆರಳಿ ವಿಶ್ರಾಂತಿ ಪಡೆದಿದ್ದರು.
Advertisement
ರಂಗು ತುಂಬಿದ ಶೋಭಾಯಾತ್ರೆಇದೇ ಮೊದಲ ಬಾರಿಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಶೋಭಾಯಾತ್ರೆಯಲ್ಲಿ ಮುಂದೆ ಸಾಗಿದ ಬಳಿಕ ಸ್ತಬ್ಧಚಿತ್ರಗಳು ಅನುಸರಿಸಿದವು. ಕಲಾ ತಂಡಗಳು, 100 ಬಣ್ಣದ ಕೊಡೆಗಳು, ಚೆಂಡೆ ವಾದ್ಯ ಮತ್ತು ವಿವಿಧ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಸುಮಾರು 70ಕ್ಕೂ ಅಧಿಕ ಸ್ತಬ್ಧಚಿತ್ರಗಳು ರಂಗು ಹೆಚ್ಚಿಸಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆ ಮೇಳೈಸಿತ್ತು. ಅಲ್ಲಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಂಡವು.