Advertisement
ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಅವರು ಉತ್ಸವಕ್ಕೆ ಚಾಲನೆ ನೀಡಿದರು. ಮೈಸೂರು ದಸರಾ ಮಾದರಿಯಲ್ಲಿ ಮಂಗಳೂರು ದಸರಾ ಮಹೋತ್ಸವ ಅತ್ಯಂತ ವಿಶಿಷ್ಟ, ವಿಭಿನ್ನ ಆಚರಣೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲಾವೈಭವಗಳು ಶ್ರೀ ಕ್ಷೇತ್ರದಲ್ಲಿ ಸಾಕಾರವಾಗಿವೆ. ಮಂಗಳೂರು ದಸರಾ ಮೂಲಕ ನಾಡಿಗೆ ಶಾಂತಿ, ನೆಮ್ಮದಿಯನ್ನು ಶ್ರೀಮಾತೆಯು ಕರಣಿಸಲಿ ಎಂದರು.
ಶ್ರೀ ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ Â. ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ,ಕಾತ್ಯಾಯಿನಿ, ಮಹಾಕಾಳಿ, ಮಹಾ ಗೌರಿ, ಸಿದ್ಧಿಧಾತ್ರಿ ದೇವಿಯರನ್ನು ವಿಗ್ರಹ ರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ ಮಹಾಗಣಪತಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಆರಂಭದಲ್ಲಿ ಶಾರದಾ ಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ನಡೆದು 11.20ರ ಸುಮಾರಿಗೆ ಪ್ರತಿಷ್ಠಾಪನೆ ನೆರವೇರಿತು. ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಕೆ. ಮಹೇಶ್ಚಂದ್ರ, ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಶೇಖರ್ ಪೂಜಾರಿ, ಜತಿನ್ ಅತ್ತಾವರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್, ಅನಸೂಯ ಬಿ.ಟಿ. ಸಾಲಿಯಾನ್, ಲೀಲಾಕ್ಷ ಬಿ. ಕರ್ಕೇರಾ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಜಯಂತ್ ನಡುಬೈಲು ಉಪಸ್ಥಿತರಿದ್ದರು.
Related Articles
ವೈಭವೋಪೇತ ಮಂಗಳೂರು ದಸರಾ ಸಡಗರಕ್ಕೆ ನಗರ ಶೃಂಗಾರಗೊಂಡಿದೆ. ಪ್ರಮುಖ ಬೀದಿಗಳು ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜಗಮಗಿಸುತ್ತಿವೆ. ಅ. 9ರ ವರೆಗೆ 10 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಲಿದೆ. ಶಾರದಾ ಮಾತೆ ಸಹಿತ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿರುವ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಾರಿ ಶ್ರೀ ಕ್ಷೇತ್ರದ ಗೋಡೆಗಳಿಗೆ ಸ್ವರ್ಣ ವರ್ಣವನ್ನು ಲೇಪಿಸಿರುವುದು ವಿಶೇಷ. ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ನಡೆಯಲಿದೆ. ಈ ಬಾರಿ ಯಾತ್ರೆಯಲ್ಲಿ ಶಾರದಾ ಮಾತೆಯ ವಿಗ್ರಹ ಮುಂಚೂಣಿಯಲ್ಲಿರುತ್ತದೆ. ಬಳಿಕ ಇತರ ಟ್ಯಾಬ್ಲೋಗಳು ಸಂಚರಿಸಲಿವೆ.
Advertisement