Advertisement

ಮನೆ ಸಕ್ರಮಗೊಳಿಸಲು ಲಂಚ ಪ್ರಕರಣ : ಗ್ರಾಮ ಕರಣಿಕ, ಗ್ರಾಮ ಸಹಾಯಕನಿಗೆ ಸಜೆ

09:08 PM Jun 15, 2022 | Team Udayavani |

ಮಂಗಳೂರು : ಮನೆ ಸಕ್ರಮಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಕರಣಿಕ ಮತ್ತು ಗ್ರಾಮ ಸಹಾಯಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಗ್ರಾಮ ಕರಣಿಕನಾಗಿದ್ದ ಎನ್‌. ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿ ಶಿಕ್ಷೆಗೊಳಗಾದವರು.

Advertisement

ಪ್ರಕರಣದ ವಿವರ
ವ್ಯಕ್ತಿಯೋರ್ವರು 2014ರ ಜೂ. 24ರಂದು ವಾಸದ ಮನೆಯನ್ನು ಸಕ್ರಮಗೊಳಿಸುವ ಸಂಬಂಧ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಗ್ರಾ.ಪಂ. ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದ್ದರು. ಆಗ ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ ಗ್ರಾಮ ಕರಣಿಕರಾಗಿದ್ದ ಎನ್‌. ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿ 15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ಜೂ.15ರಂದು ಅಂತಿಮ ತೀರ್ಪು ನೀಡಿ ಆರೋಪಿಗಳಿಗೆ ಕಲಂ 235 ಸಿಆರ್‌ಪಿಸಿ ಅಡಿಯಲ್ಲಿ ಪಿಸಿ ಕಾಯಿದೆ 1988 ಕಲಂ 7ರಂತೆ 3 ವರ್ಷಗಳ ಸಾದಾ ಸಜೆ ಮತ್ತು 20,000 ರೂ. ದಂಡ ವಿಧಿಸಿದ್ದಾರೆ. ಆರೋಪಿಗಳು ದಂಡ ಕಟ್ಟಲು ವಿಫ‌ಲವಾದರೆ ಹೆಚ್ಚುವರಿ 8 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಅಲ್ಲದೆ ಪಿಸಿ ಕಾಯಿದೆ 1988 ಕಲಂ 13 (1) (ಡಿ) ಜತೆಗೆ 13(2)ರಲ್ಲಿ 4 ವರ್ಷಗಳ ಸಾದಾ ಸಜೆ ಹಾಗೂ 30,000 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫ‌ಲರಾದರೆ ಹೆಚ್ಚುವರಿಯಾಗಿ 8 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ಎಸ್‌. ವಿಜಯ ಪ್ರಸಾದ್‌ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ. ಆರೋಪಿಗಳು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next