ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಪ್ರತಿಭಟನೆಗೆ ಸಾಕ್ಷಿಯಾದ ಮಂಗಳೂರು ಶುಕ್ರವಾರ ಬೆಳಿಗ್ಗೆ ಶಾಂತಿಯಿಂದಿದೆ. ಕರ್ಫ್ಯೂ ಜಾರಿಯಲ್ಲಿರುವ ಕಮಿಷನರೇಟ್ ವಲಯದಲ್ಲಿ ಜನ ಸಂಚಾರ, ವಾಹನ ಸಂಚಾರ ವಿರಳವಾಗಿದೆ.
ನಗರದಲ್ಲಿ ಪೊಲೀಸ್ ಭದ್ರತೆ ಮುಂದುವರಿದಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ವ್ಯವಸ್ಥೆ ಮಾಡಿದ್ದಾರೆ.
ನಗರದಲ್ಲಿ ಅಂಗಡಿ ಮುಂಗಟ್ಟು, ಹೊಟೇಲ್ ಗಳ ಬಾಗಿಲು ಮುಚ್ಚಿವೆ. ತುರ್ತು ಸೇವೆಗಳಾದ ಮೆಡಿಕಲ್, ಹಾಲು ಮುಂತಾದವುಗಳಿಗೆ ಅನುವು ಮಾಡಿಕೊಡಲಾಗಿದೆ.
ನಗರದಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ವಿರಳವಾಗಿದೆ. ವಿರಳವೆಂಬಂತೆ ಆಟೋ ರಿಕ್ಷಾಗಳು ಓಡಾಡುತ್ತಿವೆ.
ಉಡುಪಿ, ಮಣಿಪಾಲ, ಕಾರ್ಕಳದಿಂದ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ ಗಳು ಸುರತ್ಕಲ್ ವರೆಗೆ ಮಾತ್ರ ಸಂಚರಿಸುತ್ತಿದೆ. ನಗರದ ಕೇಂದ್ರ ಭಾಗದಲ್ಲಿ ನಿಷೇಧಾಜ್ಞೆ ಇರುವ ಕಾರಣದಿಂದ ಯಾವುದೇ ಬಸ್ ಗಳನ್ನು ನಗರದೊಳಗೆ ಸಂಚರಿಸಲು ಅನುಮತಿ ನೀಡಲಾಗುತ್ತಿಲ್ಲ.
ರೈಲು ಮೂಲಕ ಮಂಗಳೂರಿಗೆ ಬರುವ ಪ್ರಯಾಣಿಕರು ಮಾತ್ರ ಪರದಾಡುವಂತಾಗಿದೆ.