ಮಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ ಹೊಗೆ, ಮಣ್ಣುಗಳು ರಾಶಿ ಬಿದ್ದಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರು ಕಷ್ಟ ಅನುಭವಿಸುವಂತಾಗಿದೆ.
ನಗರದ ಬಂಟ್ಸ್ ಹಾಸ್ಟೆಲ್, ಪಿವಿಎಸ್, ಲಾಲ್‌ಬಾಗ್ ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಗಳಲ್ಲೇ ಮಣ್ಣು ಹೊಗೆಗಳು ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಅನೇಕ ಘಟನೆಗಳಿವೆ.
ಈ ಹಿಂದೆ ಪೈಪ್‌ಲೈನ್, ಚರಂಡಿ ಕಾಮಗಾರಿ, ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ರಸ್ತೆಗೆ ಬಿದ್ದ ಮಣ್ಣು ಹೊಗೆ ಅದೇ ಸ್ಥಿತಿಯಲ್ಲಿ ಇದೆ. ಇದನ್ನು ತೆರವುಗೊಳಿಸುವ ಗೋಜಿಗಳು ಸಂಬಂಧಪಟ್ಟ ಅಧಿಕಾರಿಗಳು ಹೋಗಿಲ್ಲ.
ವಾಹನ ದಟ್ಟನೆ ಇರುವ ಸಂದರ್ಭದಲ್ಲಿ ಪಕ್ಕನೇ ಬ್ರೇಕ್ ಹಾಕಿದರೆ ಹೊಗೆ ಇರುವುದರಿಂದ ಟಯರ್ ಜಾರಿಕೊಂಡು ತುಂಬಾ ದೂರ ಹೋಗಿ ವಾಹನ ನಿಲ್ಲುತ್ತದೆ. ಇದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತದೆ. ಈ ಸಮಸ್ಯೆಯಿಂದಲೇ ಬ್ಲಾಕ್‌ಗಳು ಆಗುತ್ತಿರುತ್ತದೆ.
ಮಳೆ ಬಂದರೆ ಈ ಮಣ್ಣು, ಹೊಗೆ ರಸ್ತೆ ಬದಿಗೆ ಸರಿಯುವುದು. ಆದರೆ ಅಲ್ಲಿಯವರೆಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಿ ಇದನ್ನು ತೆರವುಗೊಳಿಸಬೇಕಿದೆ.
-ಪ್ರಜ್ಞಾ ಶೆಟ್ಟಿ