ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸಿ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ಮಂಗಳೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಕಲ್ಲು ತೂರಾಟಕ್ಕೆ ಮೊದಲೇ ಯೋಜನೆ ನಡೆಸಲಾಗಿತ್ತಾ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಮಂಗಳೂರು ನಗರ ಪೊಲೀಸರು ಗಲಭೆಗೆ ಸಂಬಂಧಿಸಿದ ಕೆಲ ವಿಡಿಯೋಗಳು, ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿದೆ.
ಮಂಗಳೂರಿನಲ್ಲಿ ಕಲ್ಲು ತೂರಾಟವಾಗಿಲ್ಲ, ಪೊಲೀಸ್ ಫೈರಿಂಗ್ ನಲ್ಲಿ ಸತ್ತವರು ಅಮಾಯಕರು, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ ಎಂಬ ಆರೋಪಗಳಿಗೆ ಪೊಲೀಸರು ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಮೂಲಕ ಉತ್ತರ ನೀಡಿದ್ದಾರೆ.
ಗೋಣಿಚೀಲದಲ್ಲಿ ಕಲ್ಲು
ಗುರುವಾರ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮಧ್ಯಾಹ್ನದ ವೇಳೆ ಹಿಂಸಾ ರೂಪಕ್ಕೆ ತಿರುಗಿತ್ತು. ಆದರೆ ಇದು ಪೂರ್ವ ನಿಯೋಜಿತ ಎಂಬ ಅನುಮಾನಗಳು ಈ ದೃಶ್ಯಾವಳಿಗಳು ಹುಟ್ಟು ಹಾಕಿದೆ. ಕಲ್ಲುಗಳನ್ನು ತುಂಬಿಸಿದ್ದ ಹಲವು ಗೋಣಿ ಚೀಲಗಳನ್ನು ಒಂದು ಗೂಡ್ಸ್ ಆಟೋದಲ್ಲಿ ತುಂಬಿಸಿಡಲಾಗಿತ್ತು. ಗಲಭೆಕೋರರು ಆ ಗೋಣಿ ಚೀಲಗಳಿಂದ ಕಲ್ಲುಗಳನ್ನು ತೆಗೆದು ತೂರುವ ದೃಶ್ಯಾವಳಿಗಳು ಸೆರೆಯಾಗಿದೆ.
ಪೊಲೀಸರ ಮನವಿ
ಫೋಟೋ – ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ದಂಗೆಕೋರರ ಬಗ್ಗೆ ಮಾಹಿತಿ ತಿಳಿದವರು ತಿಳಿಸುವಂತೆ ಮನವಿ ಮಾಡಿದ್ದಾರೆ. ದಂಗೆಕೋರರ ಮಾಹಿತಿ ಮತ್ತು ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇರಿಸುವುದಾಗಿ ಪ್ರಕಟಿಸಿದ್ದಾರೆ.