Advertisement

ಮನಪಾ: ಆನ್‌ಲೈನ್‌ ಸೇವೆಗೆ ಮೀನಮೇಷ !

05:03 AM Mar 17, 2019 | |

ಮಹಾನಗರ: ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಆನ್‌ ಲೈನ್‌ನಲ್ಲಿ ಲಭಿಸಲಿದೆ ಎಂಬ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಆನ್‌ಲೈನ್‌ ಸೇವೆಗಳು ಮಾತ್ರ ಇನ್ನೂ ಜಾರಿಗೆ ಬಂದಿಲ್ಲ. ಜನವರಿಯಿಂದ ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಮಂಗಳೂರು ಮಹಾನಗರ ಪಾಲಿಕೆಯಿಂದ 10 ಸೇವೆಗಳನ್ನು ಆನ್‌ಲೈನ್‌ ಮೂಲಕ ವ್ಯವಹರಿಸಬಹುದು ಎಂಬುದಾಗಿ ಪಾಲಿಕೆ ಈ ಹಿಂದೆ ತಿಳಿಸಿತ್ತು. ಆದರೆ ಮಾರ್ಚ್‌ ಆದರೂ ಆನ್‌ಲೈನ್‌ ಸೇವೆ ಇನ್ನೂ ಆರಂಭವಾಗಿಲ್ಲ.

Advertisement

ಪ್ರಸ್ತುತ ನೀರಿನ ಬಿಲ್‌, ಪುರಭವನ ಬಾಡಿಗೆ ಸೇರಿದಂತೆ ಬಹುತೇಕ ಸೇವೆಗಳಿಗಾಗಿ ಜನರು ಪಾಲಿಕೆ ಕಚೇರಿ ಅಥವಾ ಮಂಗಳೂರು ಒನ್‌ಗೆ ತೆರಳಬೇಕಾಗಿದೆ. ಅಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆನ್‌ಲೈನ್‌ ಸೇವೆ ಆರಂಭಿಸಲಾಗುವುದು ಎಂಬುದಾಗಿ ಪಾಲಿಕೆ ಹೇಳುತ್ತಾ ಬಂದಿದ್ದರೂ ಈವರೆಗೆ ಆನ್‌ಲೈನ್‌ ಸೇವೆ ಆರಂಭವಾಗಿಲ್ಲ.

ಬಿಲ್‌ ಪಾವತಿಸುವುದೇ ತಲೆನೋವು
ಮಹಾನಗರ ಪಾಲಿಕೆಯ ವಿವಿಧ ಸೇವೆಗಳ ಬಿಲ್‌ಗ‌ಳನ್ನು ಪಾವತಿಸುವುದೇ ದೊಡ್ಡ ತಲೆನೋವು. ಕನಿಷ್ಠ ನೀರಿನ ಬಿಲ್‌ ಪಾವತಿಸಲು ಮಂಗಳೂರು ಒನ್‌ ನಲ್ಲಿ ಗಂಟೆಗಟ್ಟಲೆ ಸಾಲು ನಿಲ್ಲಬೇಕಿದ್ದು, ಇದರಿಂದ ಉದ್ಯೋಗಕ್ಕೆ ತೆರಳುವ ಜನರು ಕಷ್ಟ ಅನುಭವಿಸುಂತಾಗಿದೆ. ಇದಕ್ಕೆ ಮುಕ್ತಿ ನೀಡಲು ನೀರಿನ ಬಿಲ್‌, ಖಾತಾ ವರ್ಗಾವಣೆ ಸಹಿತ ಇತರ ಸೇವೆಗಳನ್ನು ಆನ್‌ಲೈನ್‌ ಮೂಲಕ ಪಾವತಿಸಲು ಪಾಲಿಕೆ ನಿರ್ಧರಿಸಿತ್ತು. ಇದರಂತೆ ತುಮಕೂರು ನಗರಪಾಲಿಕೆಯಲ್ಲಿ ಈಗಾಗಲೇ ಕೈಗೊಂಡಿರುವ ಆನ್‌ಲೈನ್‌ ವ್ಯವಸ್ಥೆಗಳನ್ನು ಮಂಗಳೂರಿನಲ್ಲಿಯೂ ಅಳವಡಿಸುವ ಬಗ್ಗೆ ಪಾಲಿಕೆ ಚಿಂತಿಸಿತ್ತು. ಈ ಮೂಲಕ ಎಲ್ಲ ಪೌರ ಸೇವೆಗಳು ಜನರಿಗೆ ಕುಳಿತಲ್ಲಿಯೇ ಸಿಗುವಂತೆ ಮಾಡುವ ಪರಿಕಲ್ಪನೆ ಇರಿಸಲಾಗಿತ್ತು. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಮೇಯರ್‌ ಪತ್ರಿಕಾಗೋಷ್ಠಿಯಲ್ಲಿ ದಿನ ಘೋಷಣೆ
ಪಾಲಿಕೆಯ ವಿವಿಧ ಸೇವೆಗಳನ್ನು ಆನ್‌ ಲೈನ್‌ ಮೂಲಕ ಮಾಡುವ ಯೋಜ ನೆಗೆ ಪಾಲಿಕೆ ಸಿದ್ಧತೆ ನಡೆಸಿದರೂ ಬಿಡುಗಡೆಯಾಗಿರಲಿಲ್ಲ. ಈ ನಡುವೆ ಮಾಜಿ ಮೇಯರ್‌ ಭಾಸ್ಕರ್‌ ಕೆ. ಅವರು ತನ್ನ ಆಡಳಿತಾವಧಿಯಲ್ಲಿ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ಮಹಮ್ಮದ್‌ ನಝೀರ್‌, ಫೆ. 18ರಿಂದ 10 ಆನ್‌ ಲೈನ್‌ ಸೇವೆಗಳಿಗೆ ಮರುಚಾಲನೆ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ ಮಾರ್ಚ್‌ ತಿಂಗಳಾದರೂ ಆನ್‌ಲೈನ್‌ ಸೇವೆ ಆರಂಭವಾಗಿಲ್ಲ.

ಪಾಲಿಕೆಯ ಎಲ್ಲ ಪೌರ ಸೇವೆಗಳನ್ನು ಆನ್‌ಲೈನ್‌ ಮೂಲಕ ಮಾಡಲು ಸಾಪ್ಟ್ ವೇರ್‌ ಮೇಲ್ದರ್ಜೆಗೇರಿಸುವ ಕೆಲಸ ಪ್ರಗತಿಯಲ್ಲಿದೆ. ಭಾಗಶಃ ಕೆಲಸ ಮುಗಿದಿದೆ. ಶೀಘ್ರವೇ ಹೊಸ ಆ್ಯಪ್‌ ಬಿಡುಗಡೆ ಮಾಡಿ ಅದರ ಮೂಲಕವೇ ಮೊಬೈಲ್‌ ಸಹಾಯದಿಂದ ತೆರಿಗೆ ಪಾವತಿ ಸೇರಿದಂತೆ ಪೌರ ಸೇವೆಗಳು ಲಭ್ಯವಾಗಲಿದೆ ಎಂದು ಪಾಲಿಕೆ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next