Advertisement

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ; ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾಧಿಕಾರಿ

07:59 PM Oct 23, 2019 | Naveen |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ನ.12ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.31ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಪರಿಶೀಲನೆಗೆ ನ.2 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ನ.4 ಕೊನೆಯ ದಿನ. ನ. 12ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನದ ನಡೆಯಲಿದೆ. ನ.14ರಂದು ಮತಗಳ ಎಣಿಕೆ ನಡೆಯಲಿದೆ ಎಂದರು.

ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು ಮನಪಾ ವ್ಯಾಪ್ತಿಯಲ್ಲಿ ನ.14ರವರೆಗೆ ಜಾರಿಯಲ್ಲಿರುತ್ತದೆ. ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯವು ಪಾಂಡೇಶ್ವರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದರು.

ಚುನಾವಣೆಯಲ್ಲಿ ನೋಟಾ ಚಲಾವಣೆಗೆ ಅವಕಾಶವಿದೆ. ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನು ಮುದ್ರಿಸಲಾಗುವುದು. ಚುನಾವಣೆಗೆ ಸ್ಪಧಿಸುವ ಅಭ್ಯರ್ಥಿಗಳು ತಲಾ 3 ಲಕ್ಷ ರೂ. ಚುನಾವಣಾ ವೆಚ್ಚ ಮಾಡಬಹುದು. ವೆಚ್ಚದ ಬಗ್ಗೆ ನಿಗಾ ವಹಿಸುವ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಭದ್ರತೆ ದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next