ಮಂಗಳೂರು: ನಗರದ ಕದ್ರಿ ದೇವಸ್ಥಾನದ ಆವರಣದಲ್ಲಿರುವ ಕೆರೆಗೆ ಬಿದ್ದು ಅಸ್ವಸ್ಥಗೊಂಡಿದ್ದ ಬೆಳಗಾವಿ ಜಿಲ್ಲೆ ಅಥಣಿಯ ಬಾಲಕ ಸಂದೇಶ್ (10) ಸೋಮವಾರ ಸಾವನ್ನಪ್ಪಿದ್ದಾನೆ.
ರವಿವಾರ ಸಂಜೆ ಇತರ ಮಕ್ಕಳ ಜತೆ ದೇವಸ್ಥಾನದ ಕೆರೆಗೆ ಇಳಿದು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಸಂದೇಶ್ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದನು. ಕೂಡಲೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3.30 ರ ವೇಳೆಗೆ ಆತ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈನಿಕರ ಮಕ್ಕಳ ಶಾಲೆಗೆ ಸೇರ್ಪಡೆಗೆ ಸಂಬಂಧಿಸಿ ರವಿವಾರ ಮಂಗಳೂರಿನ ಕೆನರಾ ಹೈಸ್ಕೂಲ್‌ನಲ್ಲಿ ಪ್ರವೇಶ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಯಲ್ಲಿ ಅಥಣಿಯ 60 ಮಕ್ಕಳು ಭಾಗವಹಿಸಿದ್ದರು. ಈ 60 ಜನ ಮಕ್ಕಳ ಜತೆ 5 ಮಂದಿ ಶಿಕ್ಷಕರು ಮಂಗಳೂರಿಗೆ ಬಂದಿದ್ದರು. ಪರೀಕ್ಷೆ ಮುಗಿದ ಬಳಿಕ ಸಂಜೆ ವೇಳೆಗೆ ಈ ಎಲ್ಲಾ ಮಕ್ಕಳು ಕದ್ರಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಕೆರೆಯನ್ನು ನೋಡಿ ಸ್ನಾನ ಮಾಡುವುದಕ್ಕಾಗಿ ಮಕ್ಕಳು ಕೆರೆಗೆ ಇಳಿದಿದ್ದರು. ಸ್ನಾನ ಮಾಡುತ್ತಿದ್ದಂತೆ ಸಂದೇಶ್ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದನು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀವನ್ಮರಣ ಹೋರಾಟದಲ್ಲಿದ್ದ ಬಾಲಕನಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು.
ಬಾಲಕ ಸಂದೇಶ್ (10) ಅಥಣಿ ತಾಲೂಕಿನ ಶ್ರೀಪತಿ ಶಿಂಧೆ ಮತ್ತು ರಾಜಶ್ರೀ ದಂಪತಿಯ ಪುತ್ರನಾಗಿದ್ದಾನೆ. ತಂದೆ ಶ್ರೀಪತಿ ಶಿಂಧೆ ಭೂ ಸೇನೆಯಲ್ಲಿದ್ದು, ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರನನ್ನು ಕೂಡಾ ಸೇನೆಗೆ ಸೇರ್ಪಡೆ ಮಾಡುವ ಕನಸಿನೊಂದಿಗೆ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂದುಕೊಂಡಿದ್ದರು. ಈ ನಿಟ್ಟಿನಲ್ಲಿ ಕೋಚಿಂಗ್ ಕ್ಲಾಸ್‌ಗೆ ಸೇರಿಸಿದ್ದರು. ಹಾಗೆ ಕೋಚಿಂಗ್ ಪಡೆಯುತ್ತಿದ್ದಾಗಲೇ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ ಎದುರಾಗಿತ್ತು. ಪ್ರವೇಶ ಪರೀಕ್ಷೆ ಬರೆಯುವುದಕ್ಕಾಗಿ ಸಂದೇಶ್ ಸಹಿತ ಇತರ 60 ಜನ ಮಕ್ಕಳು ಮಂಗಳೂರಿಗೆ ಬಂದಿದ್ದರು.