Advertisement

ಮಂಗಳೂರು ಚಲೋಗೆ ಅವಕಾಶ ಪೊಲೀಸರಿಗೆ ಬಿಟ್ಟ ವಿಚಾರ: ರೈ

09:30 AM Sep 06, 2017 | Team Udayavani |

ಮಂಗಳೂರು: ಬಿಜೆಪಿಯವರು ಹಮ್ಮಿಕೊಂಡಿರುವ ಬೈಕ್‌ ರ್ಯಾಲಿಗೆ ಅವಕಾಶ ನೀಡುವುದು ಪೊಲೀಸರಿಗೆ ಬಿಟ್ಟ ವಿಚಾರ. ಬೇರೆ ಬೇರೆ ಜಿಲ್ಲೆಗಳಿಂದ ಬೈಕ್‌ನಲ್ಲಿ ಕಾರ್ಯಕರ್ತರು ಆಗಮಿಸಿದಾಗ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರ್ಯಾಲಿಯ ಕುರಿತು ಆಯಾ ಜಿಲ್ಲೆಯ ಪೊಲೀಸರೇ ತೀರ್ಮಾನ ಕೈಗೊಳ್ಳಲು ಸರಕಾರ ನಿರ್ದೇಶನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. 

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಈ ರೀತಿ ಬೇರೆ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದಾಗ ಅಹಿತಕರ ಘಟನೆ ನಡೆದರೆ ಅದು ಸರಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದರು. 

ಕಳೆದ ಬಾರಿ ಶಾಂತಿ ಸಭೆ ನಡೆದ ಸಂದರ್ಭದಲ್ಲಿ ಸಾಮರಸ್ಯದ ನಡಿಗೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ನಡಿಗೆಯನ್ನು ಆಯೋಜಿಸಿದ್ದೇವೆ. ಅದು ಅಹಿತಕರ ಘಟನೆ ನಡೆದ ಪ್ರದೇಶದಲ್ಲಿ ನಡೆಯುತ್ತದೆ ಎಂದು ಸಚಿವ ರಮಾನಾಥ ರೈ ಅವರು ತಿಳಿಸಿದರು. 

ಜಿಲ್ಲೆಯ ಕಾನೂನು ಸುವ್ಯವಸ್ಥೆ  ನಮ್ಮೆಲ್ಲರ ಜವಾಬ್ದಾರಿ: ಖಾದರ್‌
ಪತ್ರಕರ್ತರ ಜತೆಗೆ ಸಚಿವ ಖಾದರ್‌ ಮಾತನಾಡಿ, ದ.ಕ.ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಬೈಕ್‌ ರ್ಯಾಲಿಗೆ ಸರಕಾರ- ಜನಪ್ರತಿನಿಧಿಗಳು ಅವಕಾಶ ನೀಡಿಲ್ಲ ಎಂದು ಹೇಳುವುದು ಸರಿಯಲ್ಲ. ಅದು ಪೊಲೀಸರಿಗೆ ಬಿಟ್ಟ ವಿಚಾರ. ರ್ಯಾಲಿಗೆ ಅವಕಾಶ ನೀಡಿ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಪೊಲೀಸರೇ ಜವಾಬ್ದಾರರು ಎಂದು ಪ್ರತಿಕ್ರಿಯಿಸಿದ್ದಾರೆ. 

ಅವಕಾಶ ಕೊಟ್ಟಾಗ ಅಥವಾ ಕೊಡದೇ ಇದ್ದಾಗ ಸರಕಾರವನ್ನು ದೂರುವುದು ಸರಿಯಲ್ಲ. ನಮಗೆ ಜಿಲ್ಲೆಯ ಶಾಂತಿ, ಸೌಹಾರ್ದತೆ ಸಾಮರಸ್ಯ ಮುಖ್ಯ. ನಾವು ಕೊಲೆ ಮಾಡಿದವರನ್ನು ಎಂದಿಗೂ ಬೆಂಬಲಿಸುವುದಿಲ್ಲ. ಶರತ್‌ ಮಡಿವಾಳ ಅವರನ್ನು ಹತ್ಯೆ ಮಾಡಿದವರನ್ನು ಎಲ್ಲೇ ಅಡಗಿದ್ದರೂ ಪೊಲೀಸರು ಪತ್ತೆ ಹಚ್ಚಲಿದ್ದಾರೆ. ಜತೆಗೆ ಅಶ್ರಫ್ ಕೊಲೆ ಹಿಂದಿರುವವರನ್ನೂ ಪೊಲೀಸರು ಪತ್ತೆ ಮಾಡಲಿದ್ದಾರೆ. 

Advertisement

ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಬಿಜೆಪಿಯವರು ಆಗ್ರಹಿಸುತ್ತಿದ್ದಾರೆ. ಆದರೆ ಕಳೆದ ಚುನಾವಣೆಗಳ ಸಂದರ್ಭದಲ್ಲಿ ಇದೇ ಬಿಜೆಪಿಯವರು ಎಸ್‌ಡಿಪಿಐಯ ಅಭ್ಯರ್ಥಿಗಳನ್ನು ನಿಲ್ಲಿಸಿ ಕಾಂಗ್ರೆಸ್ಸನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ. ಬಜರಂಗ ದಳ, ಕೆಎಫ್‌ಡಿ ರಾಷ್ಟ್ರಮಟ್ಟದ ಸಂಘಟನೆಗಳಾಗಿದ್ದು, ಅದನ್ನು ನಿಷೇಧಿಸಲು ಬಿಜೆಪಿ ಕೇಂದ್ರಕ್ಕೆ ಮನವಿ ಮಾಡಲಿ ಎಂದು ಸಚಿವ ಖಾದರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next