Advertisement

ಆತಂಕದ ಮಧ್ಯೆಯೂ ಮಂಗಳೂರು ಚಲೋ ಶಾಂತಿಯುತ

08:40 AM Sep 08, 2017 | Team Udayavani |

ಮಹಾನಗರ: ಪೊಲೀಸರ ಅನುಮತಿ ಸಿಗದೆ ದೊಡ್ಡ ಸುದ್ದಿಯಾಗಿದ್ದ ಬಿಜೆಪಿ ಯುವ ಮೋರ್ಚಾ ಘಟಕದ “ಮಂಗಳೂರು ಚಲೋ’ ಗುರುವಾರ ನಗರದಲ್ಲಿ ಶಾಂತಿಯುತವಾಗಿ ನಡೆಯಿತು.

Advertisement

ಪ್ರತಿಭಟನೆಯ ಬಿಸಿ ಕೊಂಚ ಮಟ್ಟಿಗೆ ನಗರದ ಜನಜೀವನವನ್ನೂ ತಟ್ಟಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಬೆಳಗ್ಗಿನಿಂದಲೇ ಸಂಚಾರದಲ್ಲಿ ಸಾಕಷ್ಟು ಮಾರ್ಪಾಟು ಮಾಡಿದ್ದರಿಂದ ಸಾರ್ವಜನಿಕರು ನಿತ್ಯದ ಕೆಲಸಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು  ಪರದಾಡಬೇಕಾಯಿತು. 

ಅಲ್ಲಲ್ಲಿ ನಾಕಾಬಂದಿ
ಚಲೋದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸುವ ಪ್ರತಿ ವಾಹನಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ತಪಾಸಣೆ ಮಾಡಿಯೇ ಬಿಡುತ್ತಿದ್ದರು. ಇದಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪೊಲೀಸರ ಈ ಬಿಗಿ ಬಂದೋಬಸ್ತ್ ಹಾಗೂ ಸಂಶಯಾಸ್ಪದ ವಾಹನಗಳ ತಪಾಸಣೆಯಿಂದ ಸಾರ್ವಜನಿಕರು ಸ್ವಲ್ಪ ಮಟ್ಟಿನ ಕಿರಿಕಿರಿ ಅನುಭವಿಸಿದರು. ಶಾಂತಿ ಸುವ್ಯವಸ್ಥೆಗೆ ಕಾಪಾಡಲು ಪ್ರಮುಖ ಭಾಗಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಅನುಮತಿ ಇಲ್ಲದಿದ್ದರೂ ಬಿಜೆಪಿಯವರು ಬೈಕ್‌ ರ್ಯಾಲಿ ನಡೆಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದ ಪರಿಣಾಮ ಎಲ್ಲೆಡೆ ಪೊಲೀಸರು ನಾಕಾಬಂದಿ ಹಾಕಿದ್ದರು. ಬಿ.ಸಿ.ರೋಡ್‌, ಫರಂಗಿಪೇಟೆ, ತೊಕ್ಕೊಟ್ಟು, ಸುರತ್ಕಲ್‌, ಪಣಂಬೂರು, ಗುರುಪುರ-ಕೈಕಂಬ, ಪಡೀಲ್‌, ಕೊಟ್ಟಾರಚೌಕಿಗಳಲ್ಲಿ ನಾಕಾಬಂದಿಗಳನ್ನು ಹಾಕಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿತ್ತು. 

ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸ ಲಾಗಿತ್ತು. ನಾಕಾಬಂದಿ ಹಾಕಲಾದ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿತ್ತು. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ವೇಗಕ್ಕೂ ಕಡಿವಾಣ ಹಾಕಿದ್ದರು.  

Advertisement

ಪ್ರಯಾಣಿಕರ ಪರದಾಟ
ಬಿಜೆಪಿ ಕಾರ್ಯಕರ್ತರು ಬೆಳಗ್ಗಿನಿಂದಲೇ ಜ್ಯೋತಿ ವೃತ್ತದ ಬಳಿ ಜಮಾಯಿಸುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಜ್ಯೋತಿಗೆ ಸೇರುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿತ್ತು. ಬಸ್ಸುಗಳ ಮಾರ್ಗಸೂಚಿ ಬದಲಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡಿದರು. 

ಕೆಎಸ್‌ಆರ್‌ ಟಿಸಿ ಸೇರಿದಂತೆ ಕೆಲವು ಬಸ್ಸುಗಳು ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಇಳಿಸಿ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾದವು. ಜತೆಗೆ ಹೆಚ್ಚಿನ ರಸ್ತೆಗಳು ಬಂದ್‌ ಇದ್ದ ಹಿನ್ನೆಲೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಯೂ ಕಾಡಿತು. ಧರ್ಮಸ್ಥಳ, ಬಂಟ್ವಾಳ, ಬಿಸಿರೋಡ್‌, ಪುತ್ತೂರು, ಸುಳ್ಯ ಹಾಗೂ ಉಳ್ಳಾಲ, ಕೊಣಾಜೆೆ, ಕಾಸರಗೋಡು ಕಡೆಯಿಂದ ಜ್ಯೋತಿ ವೃತ್ತದ ಮಾರ್ಗವಾಗಿ ನಗರಕ್ಕೆ ಆಗಮಿಸುವವರಿಗೆ ಹೆಚ್ಚಿನ ಅನನುಕೂಲ ಉಂಟಾಗಿತ್ತು. ಪೊಲೀಸರು ಬಂದೋಬಸ್ತ್ ಮತ್ತು ಪ್ರತಿಭಟನಕಾರರನ್ನು ಬಂಧಿಸಲು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಬಳಸಿಕೊಂಡ ಪರಿಣಾಮ ಬಿ.ಸಿ.ರೋಡ್‌-ಮಂಗಳೂರು ಮಧ್ಯೆ ಸಂಚರಿಸುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿತ್ತು.

ಜನಸಂಚಾರ ವಿರಳ
ಬೈಕ್‌ ರ್ಯಾಲಿ ಹಿನ್ನೆಲೆಯಲ್ಲಿ ಗದ್ದಲವಾದೀತೆಂಬ ಆತಂಕದಿಂದಲೋ ಏನೋ ಜನಸಂಚಾರ ವಿರಳವಾಗಿತ್ತು. ಹೊಟೇಲ್‌ಗ‌ಳಲ್ಲೂ ಮಧ್ಯಾಹ್ನ ಊಟ, ತಿಂಡಿ ತಿನಸುಗಳನ್ನು ಕಡಿಮೆ ಮಾಡಿದ್ದರು. ಜ್ಯೋತಿ- ಹಂಪನಕಟ್ಟೆ ಸುತ್ತಮುತ್ತಲು ಹೊರತುಪಡಿಸಿ ಉಳಿದೆಡೆ ವಾಹನ ಸಂಚಾರ ಕಡಿಮೆಯಿತ್ತು. 

ಸಂಚಾರ ವ್ಯತ್ಯಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹು ದೆಂಬ ನಿಟ್ಟಿನಲ್ಲಿ ಕೆಲವು ಶಾಲೆಗಳಿಗೆ ರಜೆ ನೀಡಲಾಗಿತ್ತು. ಇನ್ನು ಕೆಲವು ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಸಂಜೆಯಾಗುತ್ತಲೇ ಎಲ್ಲ ರಸ್ತೆಗಳು ಮುಕ್ತಗೊಂಡು, ಜನಜೀವನ ಸಹಜ ಸ್ಥಿತಿಗೆ ಬಂದಿತು.

ಬಿಜೆಪಿಯ ಸಿದ್ಧತೆ
ಬಿಜೆಪಿಯವರಿಗೆ ಸಮಾವೇಶ ನಡೆಸಲು ಪೊಲೀಸ್‌ ಇಲಾಖೆಯು ನೆಹರೂ ಮೈದಾನದಲ್ಲಿ ಅವಕಾಶ ನೀಡಿದ್ದರೂ, ಜ್ಯೋತಿ ವೃತ್ತ ದಲ್ಲೇ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದರು. ಬಳಿಕ ಬೈಕ್‌ ಹಾಗೂ ಪಾದ ಯಾತ್ರೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದರು. 

ಕೆಲವೊಂದು ಕಾರ್ಯಕರ್ತರು ಬೈಕ್‌ಗಳ ಮೂಲಕ ಆಗಮಿಸಿದ್ದರೆ, ಹೆಚ್ಚಿನ ಕಾರ್ಯಕರ್ತರು ಖಾಸಗಿ ವಾಹನಗಳು, ಬಸ್ಸುಗಳ ಮೂಲಕ ಬಂದಿದ್ದರು. ಕೆಲವರು ವಾಹನವನ್ನು ಒಂದೆಡೆ ನಿಲ್ಲಿಸಿ ನಡೆದು ಬಂದರೆ, ಇನ್ನೂ ಕೆಲವರು ಆಟೋ ರಿಕ್ಷಾದ ಮೂಲಕ ಆಗಮಿಸಿದರು. ಕೆಲವೊಂದೆಡೆ ಪೊಲೀಸರು ಕಾರ್ಯಕರ್ತರನ್ನು ತಡೆಯೊಡ್ಡಿದ ಪ್ರಸಂಗವೂ ನಡೆಯಿತು. ಬುಧವಾರವೇ ನಗರಕ್ಕೆ ಆಗಮಿಸಿ ಸಂಘನಿಕೇತನದಲ್ಲಿ ತಂಗಿದ್ದ ಹೆಚ್ಚಿನ ಸಂಖ್ಯೆಯ ಹೊರಜಿಲ್ಲೆಯ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next