Advertisement

ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ 70 ಕೋ.ರೂ.ವೆಚ್ಚದಲ್ಲಿ ನವೀಕರಣ

10:56 AM Aug 19, 2017 | |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದು  ನಿಲ್ದಾಣದ ಸಮಗ್ರ ನವೀಕರಣಕ್ಕೆ 70 ಕೋ. ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ನೇತ್ರಾವತಿ ರೈಲ್ವೇ ಸೇತುವೆಯಿಂದ  ಮಂಗಳೂರು ಸೆಂಟ್ರಲ್‌ವರೆಗೆ ಹಳಿ ದ್ವಿಗುಣ ಹಾಗೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ  ಪಾದಚಾರಿ ಮೇಲ್ಸೇತುವೆ ಕಾಮಗಾರಿಗಳಿಗೆ  ರೈಲು ನಿಲ್ದಾಣದಲ್ಲಿ  ಶುಕ್ರವಾರ ಜರಗಿದ ಶಿಲಾನ್ಯಾಸ ಕಾಮಗಾರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗೆ ಶೀಘ್ರ ಮಂಜೂರಾತಿ ದೊರಕಿ ಅನುಷ್ಠಾನದ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದರು.

ಅತ್ಯಂತ ಅವಶ್ಯವಾಗಿದ್ದ  ನೇತ್ರಾವತಿ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ವರೆಗೆ ಹಳಿ ದ್ವಿಗುಣ ಕಾಮಗಾರಿಗೆ ಇಂದು ಶಿಲಾನ್ಯಾಸಗೊಂಡಿದೆ. ಇದರ ಜತೆಗೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ  ಹೆಚ್ಚುವರಿಯಾಗಿ ಪಾದಚಾರಿ ಸೇತುವೆ ಯೋಜನೆಗೂ ಶಿಲಾನ್ಯಾಸವಾಗಿದೆ. ಈ ಯೋಜನೆಗಳು ಶೀಘ್ರಗತಿಯಲ್ಲಿ  ಇಲಾಖೆ ಪೂರ್ಣಗೊಳಿಸಬೇಕು ಎಂದವರು ಹೇಳಿದರು.

3 ವರ್ಷಗಳಲ್ಲಿ 1500 ಕೋ.ರೂ.ಅನುದಾನ
ದ.ಕ.ಜಿಲ್ಲೆಗೆ ಕಳೆದ 3 ವರ್ಷಗಳಲ್ಲಿ  ರೈಲ್ವೇ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಕಾಮಗಾರಿಗಳಿಗೆ 1500 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಪಡೀಲ್‌ ರೈಲ್ವೇ ಸೇತುವೆ ಸಾಕಾರಗೊಂಡಿದೆ. ಜಪ್ಪುಕುಡುಪಾಡಿಯಲ್ಲಿ  ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸಂಪರ್ಕರಸ್ತೆ ಕಾಮಗಾರಿ ಬಾಕಿ ಇದೆ. ಮಹಾಕಾಳಿಪಡು³ವಿನಲ್ಲಿ 22 ಕೋ.ರೂ. ವೆಚ್ಚವನ್ನು  ಮಹಾ ನಗರ ಪಾಲಿಕೆ ಭರಿಸಬೇಕು ಎಂದು ರೈಲ್ವೇ ಇಲಾಖೆ ಹೇಳಿದ್ದು ಇದನ್ನು  ರಾಜ್ಯ ಸರಕಾರ ಭರಿಸಿದರೆ ಶೀಘ್ರ ಕಾಮಗಾರಿಯನ್ನು  ಕೈಗೆತ್ತಿಕೊಳ್ಳಲಾಗುವುದು ಎಂದು ನಳಿನ್‌ ಕುಮಾರ್‌ ಕಟೀಲು ಹೇಳಿದರು.

10 ಕೋ.ರೂ. ಕಾಮಗಾರಿ ಅನುಷ್ಠಾನ
ಶಿಲಾನ್ಯಾಸಗೊಂಡಿರುವ ಯೋಜನೆಗಳಲ್ಲದೆ ಮಂಗಳೂರು ಸೆಂಟ್ರಲ್‌ ಹಾಗೂ ಮಂಗಳೂರು ಜಂಕ್ಷನ್‌ನಲ್ಲಿ  ಇನ್ನೂ 10 ಕೋ.ರೂ.ಮೊತ್ತದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಮಂಗಳೂರು ಸೆಂಟ್ರಲ್‌ನಲ್ಲಿ 6.5 ಕೋ.ರೂ. ವೆಚ್ಚದಲ್ಲಿ ಹೊಸ ಫ್ಲಾಟ್‌ಫಾರಂ, 2 ಕೋ.ರೂ.ವೆಚ್ಚದಲ್ಲಿ  ಹೊಸ ಪಬ್ಲಿಕ್‌ ರಿಸರ್ವೇಶನ್‌ ಕೇಂದ್ರ, 30 ಲಕ್ಷ  ರೂ. ವೆಚ್ಚದಲ್ಲಿ  ಪಾರ್ಕಿಂಗ್‌ ಸ್ಥಳ ಅಭಿವೃದ್ಧಿ, 30 ಲಕ್ಷ  ರೂ. ವೆಚ್ಚದಲ್ಲಿ ಚಾಲ್ತಿ  ಬುಕ್ಕಿಂಗ್‌  ವಿಭಾಗ, 5 ಲಕ್ಷ ರೂ. ವೆಚ್ಚದಲ್ಲಿ ಪಾವತಿಸಿ ಬಳಸುವ  ಶೌಚಾಲಯ, ಮಂಗಳೂರು ಜಂಕ್ಷನ್‌ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 5 ಲಿಫ್ಟ್‌ಗಳ ಅಳವಡಿಕೆ ಕಾಮಗಾರಿಗಳು ಇದರಲ್ಲಿ  ಸೇರಿವೆ ಎಂದು ವಿವರಿಸಿದರು. 

Advertisement

ಜಾಗ ನೀಡಿದರೆ 1 ವರ್ಷದೊಳಗೆ ಶಿಲಾನ್ಯಾಸ 
ಮಂಗಳೂರು ಜಂಕ್ಷನ್‌ನ್ನು  ವಿಶ್ವದರ್ಜೆಯ ನಿಲ್ದಾಣವಾಗಿ ರೂಪಿಸುವ ಯೋಜನೆಗೆ 100 ಎಕ್ರೆ ಜಾಗದ ಆವಶ್ಯಕತೆ ಇದೆ. ರೈಲ್ವೇ ಇಲಾಖೆಯ ಬಳಿ 60 ಎಕ್ರೆ ಜಾಗವಿದೆ ಇನ್ನೂ 40 ಎಕ್ರೆ ಅವಶ್ಯವಿದ್ದು ಈಗಾಗಲೇ ರಾಜ್ಯ ಸರಕಾರಕ್ಕೆ  ಕೋರಿಕೆ ಸಲ್ಲಿಸಲಾಗಿದೆ. ಜಾಗ ಒದಗಿಸಲು ಮಹಾನಗರ ಪಾಲಿಕೆ ಕ್ರಮ ಕೈ ಗೊಂಡರೆ 1 ವರ್ಷದೊಳಗೆ ಕಾಮಗಾರಿ ಪ್ರಾರಂಭಿಸುವಂತೆ ನಾನು ಮಾಡುತ್ತೇನೆ ಎಂದು ನಳಿನ್‌ ಕುಮಾರ್‌ ಹೇಳಿದರು. ಮಂಗಳೂರು ಮೂರು ರೈಲ್ವೇ ವಿಭಾಗಗಳಲ್ಲಿ ಹಂಚಿಹೋಗಿದ್ದು ಇದನ್ನು ಒಂದು ವಿಭಾಗವಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿದ್ದು ಕೆಲವು ತಾಂತ್ರಿಕ ತೊಡಕು ಗಳಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮೇಯರ್‌ ಕವಿತಾ ಸನಿಲ್‌ ಅವರು ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ರೈಲ್ವೇ  ಇಲಾಖೆಯಲ್ಲಿ  ಬಾಕಿಯುಳಿದಿರುವ ಸಮಸ್ಯೆಗಳನ್ನು  ಅಧಿಕಾರಿಗಳು ಶೀಘ್ರ ಇತ್ಯರ್ಥಗೊಳಿಸಬೇಕು, ಮಂಗಳೂರು ರೈಲು ನಿಲ್ದಾಣ ವಿಶ್ವದರ್ಜೆಗೇರಿಸುವ ಪ್ರಸ್ತಾವ ಹಾಗೂ ಮಂಗಳೂರು ವಿಭಾಗ ರಚನೆ  ಶೀಘ್ರ  ಸಾಕಾರಗೊಳ್ಳಬೇಕು ಎಂದು ಆಗ್ರಹಿಸಿದರು. ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಂಗಳೂರು ಜಂಕ್ಷನ್‌ನಿಂದ ಬಸ್‌ ಸೌಲಭ್ಯದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ರೈಲ್ವೇ ಪಾಲಾ^ಟ್‌ ವಿಭಾಗ ಪ್ರಬಂಧಕ ನರೇಶ್‌ ಲಾಲ್ವಾನಿ ಸ್ವಾಗತಿಸಿದರು. ಝಡ್‌ಆರ್‌ಸಿಸಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಪಾಲಾ^ಟ್‌ ವಲಯ ಸಲಹಾ ಸಮಿತಿ ಸದಸ್ಯರಾದ ಹನುಮಂತ ಕಾಮತ್‌, ಅಹಮ್ಮದ್‌ ಬಾವಾ ಉಪಸ್ಥಿತರಿದ್ದರು. ರೈಲ್ವೇ ಎರ್ನಾಕುಳಂ ವಲಯ ಮುಖ್ಯ ಎಂಜಿನಿಯರ್‌ ಎಂ. ರಣಧೀರ ರೆಡ್ಡಿ ವಂದಿಸಿದರು. ಕಿಶನ್‌ ಕುಮಾರ್‌ ಅವರು ನಿರೂಪಿಸಿದರು.

ರೈಲ್ವೇ ಸಚಿವರಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ
ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಮಂಗಳೂರು ಸೆಂಟ್ರಲ್‌ವರೆಗೆ ಹಳಿದ್ವಿಗುಣ ಹಾಗೂ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ  ಪಾದಚಾರಿ ಮೇಲ್ಸೇತುವೆ ಕಾಮಗಾರಿಗಳಿಗೆ ಹೊಸದಿಲ್ಲಿಯ ರೈಲ್ವೇ  ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರು ಭಾಗದ ಬಹುಕಾಲದ ಬೇಡಿಕೆಯಾಗಿರುವ ಹಳಿದ್ವಿಗುಣ ಯೋಜನೆ ಇಂದು ಸಾಕಾರಗೊಳ್ಳುತ್ತಿದೆ. ಇದಲ್ಲದೆ ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ  ಹೊಸದಾಗಿ ಪಾದಚಾರಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು. ಇಲಾಖೆ ಕರ್ನಾಟಕಕ್ಕೆ  2017-18 ನೇ ಸಾಲಿನಲ್ಲಿ ಅತೀ ಹೆಚ್ಚು 3174 ಕೋ.ರೂ. ಅನುದಾನ ನೀಡಿದೆ ಎಂದು ಸಚಿವರು ಹೇಳಿದರು.

ಶ್ರವಣಬೆಳಗೊಳದ ಮೂಲಕ ರಾತ್ರಿ ರೈಲು
ಮಂಗಳೂರಿನಿಂದ ಪ್ರಸ್ತುತ ಮೈಸೂರು ಮಾರ್ಗವಾಗಿ ಹೋಗುವ ಕಾರವಾರ-ಬೆಂಗಳೂರು  ರಾತ್ರಿ ರೈಲನ್ನು  ಶ್ರವಣಬೆಳಗೂಳ ಮೂಲಕ  ಓಡಿಸಬೇಕು ಎಂಬ ಬೇಡಿಕೆಗಳು ಬಂದಿವೆ. ಈ ಬಗ್ಗೆ ರೈಲ್ವೇ ಅಧಿಕಾರಿಗಳ ಜತೆ ನಾನು ಚರ್ಚಿಸಿದ್ದು  2 ತಿಂಗಳೊಳಗೆ ಇದನ್ನು  ಕಾರ್ಯಗತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

28.03 ಕೋ. ರೂ. ವೆಚ್ಚ
ನೇತ್ರಾವತಿ ರೈಲ್ವೇ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ವರೆಗಿನ 1.5.ಕಿ.ಮೀ. ರೈಲುಮಾರ್ಗದಲ್ಲಿ 28.05 ಕೋ.ರೂ. ವೆಚ್ಚದಲ್ಲಿ ಹಳಿ ದ್ವಿಗುಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಪ್ಲಾಟ್‌ಫಾರಂ 1ನ್ನು 2 ಹಾಗೂ 3ಕ್ಕೆ ಸಂಪರ್ಕಿಸುವ ಪಾದಚಾರಿ ಸೇತುವೆಯನ್ನು 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಒಟ್ಟು 25 ಮೀಟರ್‌ ಉದ್ದ ಹಾಗೂ 3 ಮೀಟರ್‌ ಅಗಲವಿದೆ. 

Advertisement

Udayavani is now on Telegram. Click here to join our channel and stay updated with the latest news.

Next