Advertisement

ಮಂಗಳೂರು ಸೆಂಟ್ರಲ್‌; 2 ಪ್ರತ್ಯೇಕ ರೈಲ್ವೇ ಪ್ಲಾಟ್‌ಫಾರಂ

09:41 AM May 15, 2022 | Team Udayavani |

ಹಂಪನಕಟ್ಟೆ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಬಹುಕಾಲದ ಬೇಡಿಕೆ ಹಾಗೂ ಹೊಸ ರೈಲುಗಳ ಆರಂಭಕ್ಕೆ ತೊಡಕಾಗಿದ್ದ 4, 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಮುಂದಡಿ ಇಟ್ಟಿದೆ.

Advertisement

ಸೆಂಟ್ರಲ್‌ನಲ್ಲಿ ಹೆಚ್ಚುವರಿ ಯಾಗಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಈ ಹಿಂದೆಯೇ ಯೋಜಿಸಲಾಗಿತ್ತು. ಆದರೆ ಹೊಸ ಪ್ಲಾಟ್‌ಫಾರಂ ಕಾಮಗಾರಿ ಕೈಗೆತ್ತಿಗೊಳ್ಳಲು ಪ್ರಸ್ತುತ ಇರುವ ಪಿಟ್‌ಲೈನ್ ನ್ನು (ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ) ಸ್ಥಳಾಂತರಿ ಸುವುದು ಅಗತ್ಯವಾಗಿತ್ತು. ಇದೀಗ ಇದರ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಸ್ಥಳಾಂತರಗೊಂಡ ಕೂಡಲೇ ಹೊಸ ಪ್ಲಾಟ್‌ಫಾರಂ ಕಾಮಗಾರಿ ಕೂಡ ಪ್ರಾರಂಭವಾಗಲಿದೆ.

‘ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ ಫಾರ್ಮ್ ಖಾಲಿ ಇಲ್ಲ’ ಎಂಬ ಸಬೂಬು ನೀಡಿ ಪ್ರಸ್ತುತ ಕಂಕನಾಡಿ, ನೇತ್ರಾವತಿ ಸೇತುವೆ ಸಮೀಪ ಕೆಲವು ರೈಲುಗಳನ್ನು ನಿಲ್ಲಿಸಲಾಗುತ್ತದೆ. ಮೂರು ಪ್ಲಾಟ್‌ ಫಾರಂಗಳಲ್ಲಿ ನಿಂತಿರುವ ರೈಲುಗಳು ಮುಂದಕ್ಕೆ ಚಲಿಸದೆ ಉಳಿದ ರೈಲುಗಳು ನಿಲ್ದಾಣ ಪ್ರವೇಶಿಸುವಂತಿಲ್ಲ.

ಹೊಸ ಪ್ಲಾಟ್‌ ಫಾರಂ ಆದರೆ ಮತ್ತೂಂದು ರೈಲು ನಿಲುಗಡೆಗೆ ಅವಕಾಶ ನೀಡುವುದರಿಂದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಜತೆಗೆ ಹೊಸ ರೈಲುಗಳ ಸೇವೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಆರಂಭಿಸಲೂ ಅವಕಾಶವಾಗುತ್ತದೆ. ಈ ಮಧ್ಯೆ ಹೊಸ ರೈಲು ಆರಂಭಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಫ್ಲಾಟ್‌ ಫಾರಂ ಇಲ್ಲ ಎಂಬ ನೆಪ ಹೇಳುವ ಖಯಾಲಿ ಇತ್ತು.

6.76 ಕೋ.ರೂ. ವೆಚ್ಚ

Advertisement

2 ಪ್ಲಾಟ್‌ಫಾರಂ ನಿರ್ಮಾಣದಿಂದ ಹೊಸ ರೈಲು ಸೇವೆಗೆ ಮಂಗಳೂರು ಸೆಂಟ್ರಲ್‌ನಿಂದ ಅವಕಾಶ ಸಿಗುವ ಸಾಧ್ಯತೆಯಿದೆ. ಪರಿಣಾಮವಾಗಿ ರೈಲು ನಿಲ್ದಾಣ ಹೆಚ್ಚು ಜನ ಬಳಕೆಗೆ ಲಭ್ಯವಾಗಲಿದೆ.

ಈವರೆಗೆ ಸೆಂಟ್ರಲ್‌ ನಿಲ್ದಾಣದಲ್ಲಿ 18 ಬೋಗಿಗಳು ನಿಲ್ಲುವ ಪಿಟ್‌ ಲೇನ್‌ (ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ) ಇತ್ತು. ಹೊಸದಾಗಿ 4 ಮತ್ತು 5ನೇ ಪ್ಲಾಟ್‌ ಫಾರಂ ನಿರ್ಮಿಸಲು ಹಾಲಿ ಇರುವ ಪಿಟ್‌ಲೈನ್ ಸ್ಥಳಾಂತರಿಸುವ ಅನಿವಾರ್ಯವಿದ್ದು, ಈ ಹಿನ್ನೆಲೆಯಲ್ಲಿ 24 ಬೋಗಿಗಳು ನಿಲ್ಲುವ ಸಾಮರ್ಥ್ಯವುಳ್ಳ ಹೊಸ ಪಿಟ್‌ ಲೇನನ್ನು 6.76 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಪಿಟ್‌ಲೇನ್‌ ಕಾಮಗಾರಿ ಬಹುತೇಕ ಪೂರ್ಣ

ಎರಡೂ ಬದಿಗಳಲ್ಲಿರುವ ಕ್ಯಾಟ್‌ ವಾಕ್‌ಗಳು ಪಿಟ್‌ಲೆçನ್‌ನಲ್ಲಿ ಬೋಗಿಗಳ ನಿರ್ವಹಣೆ ಮತ್ತು ಸ್ವಚ್ಛತೆ ಕಾರ್ಯ ಸುಲಭವಾಗಿ ನಡೆಯಲು ಸಹಾಯ ಮಾಡುತ್ತವೆ. ಪಿಟ್‌ಲೈನ್ ನಲ್ಲಿ ಬೋಗಿಗಳ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತದೆ. ಪ್ರತೀ ಸಂಚಾರದ ಬಳಿಕ ಬೋಗಿಗಳ ಗೇರ್‌, ಬ್ರೇಕ್‌ ತಪಾಸಣೆ, ವಿದ್ಯುತ್‌ ವ್ಯವಸ್ಥೆ, ನೀರು ತುಂಬಿಸುವುದು, ಬೋಗಿ ಸ್ವಚ್ಛತೆ ಮತ್ತಿತರ ನಿರ್ವಹಣೆ ಕೆಲಸಗಳನ್ನು ನಡೆಸಲಾಗುತ್ತದೆ. ಈ ಪ್ರಕಾರ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೊಸ ಪಿಟ್‌ಲೈನ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣದ ಪಿಟ್‌ ಲೇನ್‌ ಕಾಮಗಾರಿ ಅಂತಿಮ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ರೈಲು ಬೋಗಿಗಳ ನಿಲುಗಡೆ ಆರಂಭವಾಗಲಿದೆ. ಇದರಿಂದಾಗಿ 2 ಹೊಸ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಅನುಕೂಲವಾಗಲಿದೆ. -ತ್ರಿಲೋಕ್‌ ಕೊಠಾರಿ, ಮಹಾಪ್ರಬಂಧಕರು, ದಕ್ಷಿಣ ರೈಲ್ವೇ ಪಾಲ್ಘಾಟ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next