ಮಹಾನಗರ: ನಗರದಲ್ಲಿ ಮಂಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಸಂಬಂಧಿಸಿ ಮೈಸೂರು, ಬೆಂಗಳೂರು ನಗರಗಳಲ್ಲಿರುವಂತೆ ಗೌಜಿ, ಸಂಭ್ರಮ ಇಲ್ಲದಿದ್ದರೂ ತಕ್ಕ ಮಟ್ಟಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಬಯಲು ಸೀಮೆಯಿಂದ ನಗರಕ್ಕೆ ವಲಸೆ ಬಂದು ಇಲ್ಲಿ ವಾಸ ಮಾಡುತ್ತಿರುವ ಮಂದಿ ಈ ಹಬ್ಬವನ್ನು ಹೆಚ್ಚು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಆಚರಣೆ ಸಂಬಂಧಿತ ವಸ್ತುಗಳ ಖರೀದಿ ಭರದಿಂದ ನಡೆಯುತ್ತಿದೆ.
ಸಂಕ್ರಾಂತಿ ಹಬ್ಬ ಆಚರಣೆಗೆ ವಿಶೇಷವಾಗಿ ಬೇಕಾಗಿರುವ ಹೂವುಗಳು, ಬೇವು- ಬೆಲ್ಲ, ಅವರೆ ಇತ್ಯಾದಿಗಳು ಮಾರುಕಟ್ಟೆಗೆ ಆವಕವಾಗಿವೆ. ರವಿವಾರ ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಮತ್ತು ಮಾರ್ಕೆಟ್ ಹೊರ ಆವರಣದಲ್ಲಿ ಬೀದಿ ಬದಿಯಲ್ಲಿ ಹಾಗೂ ಪುರಭವನದ ಎದುರಿನ ರಸ್ತೆಯ ಬದಿ ಸಂಕ್ರಾಂತಿ ಖರೀದಿಯ ವ್ಯಾಪಾರ ಬಿರುಸಾಗಿತ್ತು. ಅವರೆ, ಬೇವು ಸೊಪ್ಪು ಖರೀದಿಗೆ ಜನರು ಹೆಚ್ಚಿನ ಒಲವು ತೋರುತ್ತಿರುವುದು ಕಂಡು ಬಂತು.
ಹೂವಿನ ಬೆಲೆ ಏರಿಕೆ: ಸಂಕ್ರಾಂತಿ ಹಿನ್ನೆಲೆಯಲ್ಲಿ ಹೂವುಗಳ ಬೆಲೆಗಳಲ್ಲಿ ತುಸು ಹೆಚ್ಚಳವಾಗಿದೆ. ಸೇವಂತಿಗೆ ಮತ್ತು ಕಾಕಡ ಹೂವುಗಳ ಬೆಲೆಗಳಲ್ಲಿ 30 ರೂ. ಹೆಚ್ಚಳವಾಗಿದೆ. ಸಾಮಾನ್ಯವಾಗಿ ಈ ಹೂವುಗಳ ಬೆಲೆ 50ರೂ. ಇದ್ದು, ರವಿವಾರ 80 ರೂಪಾಯಿಗೆ ಮಾರಾಟವಾಗುತ್ತಿತ್ತು. ಚೆಂಡು ಹೂವು ಬೆಲೆ ಹೆಚ್ಚಳವಾಗಿಲ್ಲ; ಅದರ ಬೆಲೆ 50 ರೂ. ಗಳಲ್ಲಿಯೇ ಇದೆ. ಸಂಕ್ರಾಂತಿ ಬಂದಾಗ ಹೂವುಗಳ ಬೆಲೆ ಜಾಸ್ತಿಯಾಗುವುದು ಸಾಮಾನ್ಯ. ಅದರಂತೆ ಈ ವರ್ಷವೂ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೋಮವಾರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ನಗರಕ್ಕೆ ಮೈಸೂರು ಕಡೆಯಿಂದ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ ಎನ್ನುತ್ತಾರೆ ಕೆಲವು ವರ್ಷಗಳಿಂದ ಇಲ್ಲಿ ಹೂವಿನ ವ್ಯಾಪಾರ ಮಾಡುತ್ತಿರುವ ಮೈಸೂರಿನ ಸತೀಶ್. ಅವರೆ ಕಾಳು ಬೆಲೆ 50ರೂ. ಇದೆ. ಬೇವು ಸೊಪ್ಪು ಒಂದು ಕಟ್ಟಿಗೆ 5ರೂ. ನಂತೆ ಮಾರಾಟವಾಗುತ್ತಿದೆ. ಹಬ್ಬದ ಪ್ರಯುಕ್ತ ಬೇವು ಸೊಪ್ಪನ್ನು ಅಧಿಕ ಪ್ರಮಾಣದಲ್ಲಿ ತರಿಸಿ ಮುಖ್ಯವಾಗಿ ರಸ್ತೆಯ ಬದಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಇನ್ನುಳಿದಂತೆ ಸಂಕ್ರಾಂತಿ ಪ್ರಯುಕ್ತ ಟೊಮೇಟೊ, ಅಲಸಂಡೆ, ಕೊತ್ತಂಬರಿ ಸೊಪ್ಪು ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಟೊಮೇಟೊ ಬೆಲೆ ವಾರದ ಹಿಂದೆ ಇದ್ದ ಬೆಲೆಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.