ಮಂಗಳೂರು- ಬೆಂಗಳೂರು ನಡುವೆ ನಿತ್ಯ ಎರಡು ರೈಲು ಸಂಚರಿಸಿದರೆ ಕರಾವಳಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಹೆದ್ದಾರಿ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಶತಾಬ್ದಿ, ಗರೀಬ್ ರಥ್‌ನಂತಹ ಆರಾಮಾಸನಗಳುಳ್ಳ ರೈಲು ಓಡಿಸಿದರೆ ಜನರಿಗೂ ಅನುಕೂಲ, ರೈಲ್ವೇಗೂ ಲಾಭವಾಗುತ್ತದೆ.
ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬೆಂಗಳೂರು-ಹಾಸನ- ಮಂಗಳೂರು ರೈಲು ಮಾರ್ಗದ ಕೆಲಸ ಪೂರ್ಣಗೊಂಡು ಕರಾವಳಿ ಭಾಗದವರ ರೈಲಿನ ಕನಸು ಚಿಗುರೊಡೆಯಲು ತೊಡಗಿದೆ. ಬೆಂಗಳೂರು -ಹಾಸನ ನಡುವೆ ಮುಂದಿನ ತಿಂಗಳಲ್ಲೇ ರೈಲು ಸಂಚಾರ ಪ್ರಾರಂಭವಾಗಲಿದೆ. ಇಂಟರ್‌ಸಿಟಿ ರೈಲಿನ ವೇಳಾಪಟ್ಟಿಯೂ ಬಹುತೇಕ ಆಖೈರುಗೊಂಡಿದೆ. ಈ ಮಾರ್ಗದಲ್ಲಿ ಬೆಂಗಳೂರು -ಮಂಗಳೂರು ನಡುವೆ ರೈಲು ಓಡಿಸಿದರೆ ಕರಾವಳಿಯ ಜನರಿಗಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರಮುಖವಾದದ್ದು ಸಮಯದ ಉಳಿತಾಯ.
ಈಗ ಮಂಗಳೂರು-ಬೆಂಗಳೂರು ನಡುವೆ ಎರಡು ರೈಲು ಸಂಚರಿಸುತ್ತವೆ. ಒಂದು ಕಾರವಾರದಿಂದ ಹೊರಟು ಮಂಗಳೂರು ಮೂಲಕ ಬೆಂಗಳೂರಿಗೆ ಹೋದರೆ ಇನ್ನೊಂದು ಕೇರಳದ ಕಣ್ಣೂರಿನಿಂದ ಹೊರಟು ಮಂಗಳೂರು ಜಂಕ್ಷನ್ ಮೂಲಕ ಬೆಂಗಳೂರಿಗೆ ಹೋಗುತ್ತದೆ. ಈ ಪೈಕಿ ಎರಡನೆಯದ್ದು ಸಂಪೂರ್ಣ ಕೇರಳಿಗರಿಗೆ ಮೀಸಲಾಗಿದ್ದು, ಅದರಿಂದ ರಾಜ್ಯದವರಿಗಾಗುವ ಪ್ರಯೋಜನ ಅಷ್ಟಕ್ಕಷ್ಟೆ. ಈ ರೈಲುಗಳು ಮಂಗಳೂರಿನಿಂದ ಬೆಂಗಳೂರು ತಲುಪಲು ಕನಿಷ್ಠ 14-15 ತಾಸು ಹಿಡಿಯುತ್ತದೆ.
ಮಂಗಳೂರು- ಬೆಂಗಳೂರು ನಡುವೆ ಇನ್ನೊಂದು ರೈಲು ಓಡಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ರೈಲ್ವೇ ಅದನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ. ಹಾಗೇ ನೋಡಿದರೆ ಪಕ್ಕದ ಕೇರಳ ಅಥವಾ ತಮಿಳುನಾಡಿನಷ್ಟು ರೈಲ್ವೇ ಸೌಲಭ್ಯ ಕರ್ನಾಟಕದಲ್ಲಿಲ್ಲ. ಕರ್ನಾಟಕದಿಂದ ಹಲವು ಮಂದಿ ರೈಲ್ವೇ ಸಚಿವರಾಗಿದ್ದರೂ ರಾಜ್ಯವನ್ನು ರೈಲ್ವೇ ಭೂಪಟದಲ್ಲಿ ಪ್ರಮುಖವಾಗಿ ಗುರುತಿಸುವಂತೆ ಮಾಡುವಲ್ಲಿ ಅವರು ವಿಫಲರಾಗಿದ್ದಾರೆಂದೇ ಹೇಳಬೇಕು.
ಬೆಂಗಳೂರು-ಮಂಗಳೂರು ನಡುವೆ ಹಾಸನ ಮಾರ್ಗವಾಗಿ ಇಂಟರ್‌ಸಿಟಿ ರೈಲು ಓಡಿಸುವ ಪ್ರಸ್ತಾವ ಇದ್ದು, ಇದು ಕಾರ್ಯಗತಗೊಂಡರೆ ಈ ಭಾಗದ ಜನರಿಗೆ ಅನೇಕ ಅನುಕೂಲತೆಗಳಿವೆ. ಇಲ್ಲಿನವರಿಗೆ ಮುಖ್ಯವಾಗಿ ಬೇಕಾಗಿರುವುದು ರಾತ್ರಿ ಹೊರಟು ಬೆಳಗ್ಗೆ ಕಚೇರಿ ಮತ್ತಿತರ ಕೆಲಸ ಕಾರ್ಯಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಬೆಳಗ್ಗೆ ಬೆಂಗಳೂರಿಗೆ ತಲುಪುವ ರೈಲು. ಈ ರೈಲನ್ನು ಗೋವಾದಿಂದ ಹೊರಡುವಂತೆ ಮಾಡಿದರೆ ಎರಡು ರಾಜ್ಯದ ಜನರಿಗೆ ಪ್ರಯೋಜನವಾಗುತ್ತದೆ. ಈಗ ನಿತ್ಯ ಕಡಿಮೆಯೆಂದರೂ ಸುಮಾರು 500 ಬಸ್‌ಗಳು ಪಣಜಿ, ಕಾಸರಗೋಡು, ಕಾರವಾರ, ಉಡುಪಿ, ಮಂಗಳೂರು ಭಾಗದಿಂದ ಬೆಂಗಳೂರಿಗೆ ಸಂಚರಿಸುತ್ತಿವೆ. ಇವುಗಳ ಟಿಕೇಟ್ ದರ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಹಬ್ಬ, ರಜೆಯಂತಹ ದಿನಗಳಲ್ಲಿ ಅಕ್ಷರಶಃ ಸುಲಿಗೆಯನ್ನೇ ಮಾಡಲಾಗುತ್ತಿದೆ.
ಬೆಂಗಳೂರು-ಮಂಗಳೂರು ನಡುವೆ ರೈಲು ಸೇವೆಗೆ ಅಡ್ಡಿ ಒಡ್ಡುತ್ತಿರುವುದು ಬಲಿಷ್ಠ ಬಸ್ ಲಾಬಿ ಎಂಬ ಗುಮಾನಿ ಹಿಂದಿನಿಂದಲೂ ಇದೆ. ರೈಲು ಶುರುವಾದರೆ ಬಸ್ ಲಾಬಿ ಹೇಗೆ ತಣ್ಣಗಾಗುತ್ತದೆ ಎನ್ನುವುದಕ್ಕೆ ಕೊಂಕಣ ರೈಲ್ವೇಯೇ ಸಾಕ್ಷಿ. ಈ ರೈಲು ಮಾರ್ಗದಿಂದಾಗಿ ಮುಂಬಯಿ ಪ್ರಯಾಣ ಬಹಳ ಸುಲಭ ಮತ್ತು ಅಗ್ಗವಾಗಿದೆ. ರೈಲ್ವೇಗೆ ಲಾಭ ಗಳಿಸಿಕೊಡುವ ಮಾರ್ಗಗಳಲ್ಲಿ ಇದೂ ಒಂದು. ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನೂ ಹೀಗೆ ಜನೋಪಯೋಗಿಯಾಗಿ ಮಾಡಬೇಕು. ಇದರಿಂದ ಸರಕು ಸಾಗಾಟಕ್ಕೂ ಅನುಕೂಲವಾಗುತ್ತದೆ. ಈ ಮಾರ್ಗದಿಂದ ಅತಿ ಹೆಚ್ಚಿನ ಲಾಭವಾಗುವುದು ಮಂಗಳೂರು ಬಂದರಿಗೆ. ಬೆಂಗಳೂರು-ಮಂಗಳೂರು ನಡುವೆ ಬರೀ 9 ತಾಸಿನ ಅಂತರವಿದ್ದರೂ ಕಂಟೈನರ್ ಸಾಗಾಟಕ್ಕೆ ಅನುಕೂಲವಿಲ್ಲದಿರುವ ಕಾರಣ ವೈಟ್‌ಫೀಲ್ಡಿನಲ್ಲಿರುವ ಇಂಟರ್ನಲ್ ಕಂಟೈನರ್ ಡಿಪೊದಿಂದ ಒಂದೇ ಒಂದು ಕಂಟೈನರ್ ಮಂಗಳೂರಿಗೆ ಬರುವುದಿಲ್ಲ. ಬದಲಾಗಿ ಚೆನ್ನೈ ಅಥವಾ ಟುಟಿಕೊರಿನ್ ಮೂಲಕ ವಿದೇಶಗಳಿಗೆ ಹೋಗುತ್ತದೆ. ಇದು ನಿಜವಾಗಿಯೂ ನಾವು ತಲೆತಗ್ಗಿಸಬೇಕಾದ ವಿಷಯ.
ಸದಾನಂದ ಗೌಡರು ರೈಲ್ವೇ ಸಚಿವರಾಗಿದ್ದಾಗ ಬೆಂಗಳೂರು- ಮಂಗಳೂರು ಮಾರ್ಗವನ್ನು ದ್ವಿಪಥಗೊಳಿಸುವ ಕನಸು ಬಿತ್ತಿದ್ದಾರೆ. ಇದನ್ನು ನನಸು ಮಾಡುವ ಇಚ್ಛಾಶಕ್ತಿಯನ್ನು ನಮ್ಮನ್ನಾಳುವವರು ತೋರಿಸಿದರೆ ಅದು ನಾಡಿನ ಜನರ ಭಾಗ್ಯವೆಂದೇ ಹೇಳಬಹುದು.