Advertisement

Train ಮಂಗಳೂರು-ಬೆಂಗಳೂರು ರೈಲು ಪುನರಾರಂಭ: ರೈಲು ಮಾರ್ಗ ದುರಸ್ತಿ ಪೂರ್ಣ

01:35 AM Aug 09, 2024 | Team Udayavani |

ಸುಬ್ರಹ್ಮಣ್ಯ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್‌ನಲ್ಲಿ ಭೂಕುಸಿತ ನಡೆದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 12 ದಿನಗಳ ಬಳಿಕ ಗುರುವಾರದಿಂದ ರೈಲು ಸಂಚಾರ ಪುನರಾರಂಭಗೊಂಡಿದೆ.

Advertisement

ಜು. 26ರಂದು ರಾತ್ರಿ ಹಾಸನ ಜಿಲ್ಲೆಯ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್‌ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿತ್ತು. ಪರಿಣಾಮವಾಗಿ ತತ್‌ಕ್ಷಣ ದಿಂದಲೇ ಮಂಗಳೂರು- ಬೆಂಗಳೂರು ನಡುವಣ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಿಂದ ಹೊರಟಿದ್ದ ಬಿಜಾಪುರ ಎಕ್ಸ್‌ಪ್ರೆಸ್‌ ರೈಲನ್ನು ಹಿಂದಕ್ಕೆ ಕರೆಯಿಸಿಕೊಳ್ಳ ಲಾಗಿತ್ತು. ಘಟನೆ ಸಂಭವಿಸಿದ ತತ್‌ಕ್ಷಣದಿಂದಲೇ ರೈಲು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು.

ಸಮಾರೋಪಾದಿಯಲ್ಲಿ ನಡೆದ ದುರಸ್ತಿ ಕಾರ್ಯ
ಘಟನೆ ಸಂಭವಿಸಿದ ಸ್ಥಳ ಘಟ್ಟ ಪ್ರದೇಶ ವಾಗಿದ್ದು, ಭಾರೀ ಸವಾಲಿನ ನಡುವೆ ದುರಸ್ತಿ ನಡೆಸಲಾಗಿತ್ತು. ನಿರಂತರ ಭಾರೀ ಮಳೆ, ಹವಮಾನ ವೈಪರೀತ್ಯಗಳ ನಡುವೆಯೂ ರೈಲು ಮಾರ್ಗದ ದುರಸ್ತಿಯನ್ನು ಮುಂದು ವರಿಸಲಾಗಿತ್ತು.

ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಹಗಲು-ರಾತ್ರಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. 3,500ಕ್ಕೂ ಅಧಿಕ ಘನ ಮೀಟರ್‌ ಬಂಡೆಗಳನ್ನು, 1 ಲಕ್ಷ ಮರಳು ತುಂಬಿದ ಚೀಲಗಳನ್ನು, 10ರಷ್ಟು ಹಿಟಾಚಿ ಮತ್ತಿತರ ಯಂತ್ರಗಳ ಸಹಿತ ದುರಸ್ತಿ ಕಾರ್ಯಕ್ಕೆ ಬೇಕಾಗುವ ಕಚ್ಚಾ ವಸ್ತುಗಳು, ಕಾರ್ಮಿಕರ ಅಗತ್ಯ ವಸ್ತುಗಳನ್ನು ಸ್ಥಳಕ್ಕೆ ಪೂರೈಸಿ ನಿರಂತರ ಶ್ರಮಿಸಲಾಗಿತ್ತು. ಆ. 20ರ ವರೆಗೂ ಕೆಲವು ಪೂರಕ ಕೆಲಸಗಳು ಸ್ಥಳದಲ್ಲಿ ಮುಂದುವರಿಯಲಿವೆ ಎಂದು ತಿಳಿದುಬಂದಿದೆ.

ಆ. 4ರಂದು ದುರಸ್ತಿಯನ್ನು ಬಹುತೇಕ ಪೂರ್ಣಗೊಳಿಸಿ, ಪರಿಶೀಲಿಸಿ ಎಂಜಿನ್‌ ಓಡಾಟ ನಡೆಸಲಾಗಿತ್ತು. ಆ. 6ರಂದು ತಾಸಿಗೆ 15 ಕಿ.ಮೀ. ವೇಗದಲ್ಲಿ ತುಂಬಿದ ಗೂಡ್ಸ್‌ ರೈಲು ಓಡಾಟ ನಡೆಸಲಾಗಿತ್ತು. ಬಳಿಕ ಗೂಡ್ಸ್‌ ರೈಲು ಓಡಾಟ ಪುನರಾರಂಭ ಮಾಡಲಾಗಿತ್ತು. ಗುರುವಾರದಿಂದ ಪ್ರಯಾಣಿಕ ರೈಲುಗಳ ಓಡಾಟಕ್ಕೂ ಅವಕಾಶ ನೀಡಲಾಗಿದ್ದು, ಅದರಂತೆ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನ ದುರಸ್ತಿ ನಡೆಸಲಾದ ಸ್ಥಳದ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಮುಂದೆ ಈ ಮಾರ್ಗದಲ್ಲಿ ನಿಗದಿತ ದಿನಾಂಕ, ಸಮಯದಂತೆ ಎಲ್ಲ ರೈಲುಗಳು ಸಂಚರಿಸಲಿವೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ರೈಲ್ವೇ ಇಲಾಖೆಯ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಮತ್ತು ಎಜಿಎಂ ಕೆ.ಎಸ್‌. ಜೈನ್‌ ಅವರು ಅವರು ದುರಸ್ತಿ ಕಾರ್ಯದಲ್ಲಿ ಶ್ರಮಿಸಿದ ಕಾರ್ಮಿಕರು, ಅಧಿಕಾರಿಗಳು, ಸಿಬಂದಿಯ ತಂಡವನ್ನು ಶ್ಲಾಘಿಸಿದ್ದಾರೆ.

Advertisement

2018ರಲ್ಲೂ ಸ್ಥಗಿತ
2018ರ ಆಗಸ್ಟ್‌ನಲ್ಲಿ ಭಾರೀ ಮಳೆಗೆ ಸಿರಿಬಾಗಿಲು – ಎಡಕುಮೇರಿ ನಡುವೆ ಹಲವೆಡೆ ರೈಲು ಮಾರ್ಗದ ಮೇಲೆ ಗುಡ್ಡ ಕುಸಿದ ಪರಿಣಾಮ ಆಗ ಸುಮಾರು 40 ದಿನಗಳಿಗೂ ಅಧಿಕಾ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸವಾಲಿನ ನಡುವೆ ಅಂದು ಕೂಡ ಕಾಮಗಾರಿ ನಿರ್ವಹಿಸಲಾಗಿತ್ತು. ಬಳಿಕವೂ ಮಳೆಗಾಲದಲ್ಲಿ ಘಟ್ಟ ಪ್ರದೇಶದಲ್ಲಿ ಒಂದಲ್ಲೊಂದು ಸಮಸ್ಯೆ ಮುಂದುವರಿಯುತ್ತಲೇ ಬಂದಿದೆ.

ಯಾವೆಲ್ಲ ರೈಲು ಪುನರಾರಂಭ?
ರೈಲು ಸಂಖ್ಯೆ 16511 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು, 16586 ಎಸ್‌ಎಂವಿಟಿ ಬೆಂಗಳೂರು- ಮುರುಡೇಶ್ವರ, 16595 ಕೆಎಸ್‌ಆರ್‌ ಬೆಂಗಳೂರು- ಕಾರವಾರ ಪಂಚಗಂಗಾ ಮತ್ತು 07377 ವಿಜಯಪುರ- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ವಿಶೇಷ ಮತ್ತು 16575 ಯಶವಂತಪುರ- ಮಂಗಳೂರು ಜಂಕ್ಷನ್‌ಗಳು ಗುರುವಾರ ಪ್ರಯಾಣ ಆರಂಭಿಸಿದವು.

ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್‌ಬೆಂಗಳೂರು, 16586 ಮುಡೇìಶ್ವರ- ಎಸ್‌ಎಂವಿಟಿ ಬೆಂಗಳೂರು, 16596, ಕಾರವಾರ-ಕೆಎಸ್‌ಆರ್‌ ಬೆಂಗಳೂರು ಪಂಚಗಂಗಾ ಮತ್ತು 16576 ಮಂಗಳೂರು ಜಂಕ್ಷನ್‌-ಯಶವಂತಪುರ ಗೋಮಟೇಶ್ವರ ತ್ರಿಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆ. 9, ಶುಕ್ರವಾರ ಪ್ರಯಾಣ ಪ್ರಾರಂಭಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next