ಮಂಗಳೂರು: ಚಂದ್ರನ ಮೇಲೆ ಗಗನಯಾತ್ರಿ ಹೇಗೆ ನಡೆಯಬಹುದು ಎಂಬುದರ ಅರಿವು ಬಾಹ್ಯಾಕಾಶ ಕುತೂಹಲಿಗರಿಗೆ ಇರಬಹುದು. ಅದೇ ಮಾದರಿಯಲ್ಲಿ ಹೊಂಡ-ಗುಂಡಿಗಳಿಂದ ಕೂಡಿರುವ ನಗರದ ಸೆಂಟ್ರಲ್ ಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ ಗಗನಯಾತ್ರಿ ನಡೆದರೆ ಹೇಗಿರಬಹುದು?
ಮಂಗಳೂರಿನ ರಸ್ತೆಗಳ “ಗುಂಡಿಗಳಿಗೆ ಮುಕ್ತಿ ನೀಡಿ’ ಎಂಬ ಕಳಕಳಿಯಿಂದ ಮಂಗಳೂರಿನ 6ನೇ ತರಗತಿ ವಿದ್ಯಾರ್ಥಿನಿ ಗಗನಯಾತ್ರಿಯ ದಿರಿಸಿನಲ್ಲಿ ನಗರದಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾಳೆ.
ಚಂದ್ರನ ಮೇಲೆ ಇಳಿದು ಅಲ್ಲಿ ಹೊಂಡ-ಗುಂಡಿಗಳ ನಡುವೆ ಸಾಗುವ ಬಾಹ್ಯಾಕಾಶದ ವಿನೂತನ ಪರಿಕಲ್ಪನೆಯನ್ನು ಮಂಗಳೂರಿನ ರಸ್ತೆ ಹೊಂಡವನ್ನು ಪ್ರತಿನಿಧಿಸುವಂತೆ ವೀಡಿಯೋ ಚಿತ್ರೀಕರಿಸಲಾಗಿದೆ. ಚಂದ್ರನಂತೆಯೇ ಮಂಗಳೂರಿನ ರಸ್ತೆಯೂ ಹೊಂಡ-ಕಲ್ಲುಗಳಿಂದ ಕೂಡಿದೆ ಎಂಬುದನ್ನು ಪಾಲಿಕೆಗೆ ಸೂಚ್ಯವಾಗಿ ತಿಳಿಸುವುದು ಈ ವಿನೂತನ ಪ್ರತಿಭಟನೆಯ ಆಶಯ.
ಬೆಂಗಳೂರಿನ ಕಲಾವಿದ ಪ್ರೇರಣೆ
ಬೆಂಗಳೂರಿನಲ್ಲಿ ಇತ್ತೀಚೆಗೆ ಕಲಾವಿದರೊಬ್ಬರು ಇದೇರೀತಿ ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ಮಾದರಿಯಲ್ಲಿಯೇ ಮಂಗಳೂರಿನ ಪ್ರತಿಭಟನೆ ಕೂಡ ನಡೆದಿದೆ. ಸೆ. 20ರಂದು ರಾತ್ರಿ 10ರ ಸುಮಾರಿಗೆ ಈ ವೀಡಿಯೋ ಮಾಡಲಾಗಿದ್ದು, ಸದ್ಯ ವೈರಲ್ ಆಗಿದೆ.
ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ನಗರದ ಎಂಸಿಸಿ ಸಿವಿಕ್ ಗ್ರೂಪ್‌ನಿಂದ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅರ್ಜುನ್ ಮಸ್ಕರೇನ್ಹಸ್ ಹಾಗೂ ಅಜೊಯ್ ಡಿ’ಸಿಲ್ವ ವಿನೂತನ ಪ್ರತಿಭಟನೆಗೆ ನಿರ್ಧರಿಸಿದ್ದರು. ನಗರದ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಆ್ಯಡ್ಲಿನ್ ಡಿಸಿಲ್ವ ಈ ವಿನೂತನ ಪ್ರತಿಭಟನೆ ಮಾಡಿದ ಬಾಲೆ!