Advertisement
ಬಶೀರ್ ಅವರ ಪುತ್ರ ಅಬುದಾಭಿಯಲ್ಲಿ ಉದ್ಯೋಗದಲ್ಲಿದ್ದು ಅವರು ಅಲ್ಲಿಂದ ಬರಲು ಕಾಲಾವಕಾಶ ಬೇಕಾಗಿದ್ದುದರಿಂದ ಬಶೀರ್ ಅವರ ಅಂತ್ಯಸಂಸ್ಕಾರವನ್ನು ಸಾಯಂಕಾಲದ ಹೊತ್ತಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಅದರಂತೆ ಅವರ ಪುತ್ರ ಇರ್ಶಾನ್ ಅವರು ಆಗಮಿಸುತ್ತಿದ್ದಂತೆಯೇ ಬಶೀರ್ ಅವರ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಇಸ್ಲಾಂ ಸಂಪ್ರದಾಯದಂತೆ ನಡೆಸಲಾಯಿತು. ಅಂತ್ಯಸಂಸ್ಕಾರ ಸ್ಥಳಕ್ಕೆ ಜನಸಾಗರವೇ ಹರಿದುಬಂದಿದ್ದು ಮತಾಂಧರ ದಾಳಿಗೆ ಪ್ರಾಣತ್ಯಜಿಸಿದ ಅಮಾಯಕ ಬಶೀರ್ ಅವರಿಗೆ ಎಲ್ಲರೂ ಕಂಬನಿ ತುಂಬಿದ ಅಂತಿಮನಮನಗಳನ್ನು ಸಲ್ಲಿಸಿದರು. ಕೂಳೂರು ಪರಿಸರ ಸೇರಿದಂತೆ ಮಂಗಳೂರಿನಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಬಷೀರ್ ನಿಧನ
ಮಂಗಳೂರು: ಕೊಟ್ಟಾರ ಚೌಕಿ ಬಳಿ ಜ.3ರಂದು ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿ ಎಜೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್(45) ಇಂದು ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Related Articles
Advertisement
ಜ. 3ರಂದು ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಬಶೀರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು.
ಬಶೀರ್ ಸಾವಿನ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಸದ್ಯ ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಸ್ಥಿತಿ ಇದೆ. ನೂರಾರು ಸಂಘಟನೆಗಳು ಮುಖಂಡರು ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿವೆ.
ಬಶೀರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಶೀರ್ ಮನೆಗೆ ನೂರಾರು ಜನ ಬಂಧುಗಳು ಆಗಮಿಸಿದ್ದಾರೆ.
ಮೆರವಣಿಗೆ ಮಾಡಬೇಡಿ
ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡಬೇಡಿ ಇದಕ್ಕೆ ನಾನು ವಿರೋಧಿ , ಇಬ್ಬರು ಅಮಾಯಕರ ಜೀವಗಳಿಗೆ ಶಾಂತಿ ಬೇಕು. ಕರಾವಳಿಯಲ್ಲಿ ಶಾಂತಿ ನೆಲೆಸಬೇಕು ಎಂದು ಮೋಯಿದ್ದೀನ್ ಬಾವಾ ಅವರು ತಮ್ಮ ಸಮುದಾಯದವರಿಗೆ ಕಟ್ಟಪ್ಪಣೆ ಮಾಡಿರುವುದಾಗಿ ವರದಿಯಾಗಿದೆ.
10 ಲಕ್ಷ ರೂ ಪರಿಹಾರ ಬಶೀರ್ ಅವರ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂತ 5 ಲಕ್ಷ ರೂಪಾಯಿ ಮತ್ತು ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.