Advertisement

ಒಂದೆಡೆ ರಾಜಕೀಯ,ಇನ್ನೊಂದೆಡೆ ಆಡಳಿತ;ಗುರಿ ಒಂದೇ-ಮನೆ ಮನೆ ಭೇಟಿ!

06:15 AM May 06, 2018 | |

ಮಂಗಳೂರು: ಬೆಳಗ್ಗೆ 9 ಗಂಟೆ. ಬಿಸಿಲಿನ ತಾಪ ಏರುವ ಹೊತ್ತದು. ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣ ಕಾವು ಹೀಗೆಯೇ ಇದೆಯೇ ಎಂಬ ಕುತೂಹಲದಿಂದ ಕ್ಷೇತ್ರ ಸಂಚಾರಕ್ಕೆ ಹೊರಟದ್ದು ಕುತ್ತಾರು ಮೂಲಕ. ಅಬ್ಬರದ ಪ್ರಚಾರ ಇಲ್ಲವಾದ್ದರಿಂದ ಓಟಿಗಾಗಿ ಮನೆ- ಮನೆ ಭೇಟಿ ಹೇಗಿದೆ ಎಂದು ನೋಡುತ್ತಾ ಸಾಗಿತು “ಉದಯವಾಣಿ’ ತಂಡ.

Advertisement

ಕುತ್ತಾರಿನ ಕೊರಗಜ್ಜ ಕಟ್ಟೆಯ ಸಮೀಪ ಅಂಗಡಿ ಬಳಿ ಹೋದಾಗ ಅಲ್ಲಿ ಒಂದು ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ರೆಡಿ ಯಾಗುತ್ತಿದ್ದರು. ತಲೆಗೆ ಪಕ್ಷದ ಗುರುತಿನ ಟೊಪ್ಪಿ ಹಾಕಿಕೊಂಡು, ಹೆಗಲಲ್ಲಿ ಶಾಲು ಹಾಕಿಕೊಂಡು, ಕೈಯಲ್ಲಿ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ವಿವರದ ಪತ್ರವನ್ನು ಇಟ್ಟುಕೊಂಡು ಇನ್ನೇನು ಹೊರಡುವ ಸಿದ್ಧತೆಯಲ್ಲಿದ್ದರು. ಹರೇಕಳ ರಸ್ತೆಯಲ್ಲಿ  ಸುಮತಿ ಎಂಬವರ ಮನೆಗೆ ಹೋದರೆ ಅಲ್ಲಿ ಮನೆಯವರ ಜತೆಗೆ ಯಾರೋ ಮಾತನಾಡುತ್ತಿದ್ದರು.

ಪಕ್ಷದವರಾಗಿರಬೇಕು ಎಂದು ವಿಚಾರಿಸಿದರೆ ಅಲ್ಲ, ಅವರು ಜಿಲ್ಲಾ ಚುನಾವಣಾ ಧಿಕಾರಿ ನಿರ್ದೇಶನದ ಮೇರೆಗೆ ಬಂದಂ ಥವರು. “ಫೋಟೋ ವೋಟರ್ ಸ್ಲಿಪ್‌ಗ್ಳನ್ನು ಮನೆ- ಮನೆಗೆ ತೆರಳಿ ಹಂಚುವ ಕೆಲಸ ಮಾಡುತ್ತಿದ್ದೇವೆ. ಸ್ಲಿಪ್‌ ಪಡೆಯಲು ಬಾಕಿ ಇರುವವರು ಮೇ 7ರಂದು ಆಯಾಯ ಮತಗಟ್ಟೆಗಳಿಗೆ ತೆರಳಿ ಅಲ್ಲಿರುವ ಬಿಎಲ್‌ಒಗಳಿಂದ ಪಡೆಯಲು ಅವಕಾಶವಿದೆ’ ಎಂದು ಉತ್ತರಿಸಿದರು. 

ತೊಕ್ಕೊಟ್ಟು ಕಡೆಗೆ ಬಂದಾಗ ಬೇಕರಿ ಮಾಲಕರೊಬ್ಬರು ಮಾತಿಗೆ ಸಿಕ್ಕಿದರು. “ಮೊದಲಿಗೆ ಈ ಫ್ಲೆ$ç ಓವರ್‌ ಒಂದು ಕೆಲಸ ಮುಗೀಲಿ ಅಂತ ಕಾಯುತ್ತಿದ್ದೇವೆ. ಪಂಪ್‌ವೆಲ್‌ ಫ್ಲೈ ಓವರ್‌ನಂತೆ ಇದು ಕೂಡ ವರ್ಷಗಟ್ಟಲೆ ಸಮಸ್ಯೆಯಾಗದಿರಲಿ ಎಂಬುದಷ್ಟೇ ನಮ್ಮ ಕಳಕಳಿ’ ಎಂದರು. 

ದೂರುವುದಷ್ಟೇ ಕೆಲಸ
ತೊಕ್ಕೊಟ್ಟು ಒಳಪೇಟೆಯಲ್ಲಿ ದಿನಸಿ ಅಂಗಡಿಯಲ್ಲಿ ಕುಳಿತು ಕಿಶನ್‌ ಎಂಬವರು ಉದಯವಾಣಿಯ “ಓಟಿನ ಬೇಟೆ’ ಓದುತ್ತಿರುವುದು ಕಾಣಿಸಿತು. “ವೋಟುದ ದಾದ ಉಂಡು ವಿಶೇಷ’ ಎಂದು ಕೇಳಿದ್ದಕ್ಕೆ, ಅವರು ಒಮ್ಮೆ ಮುಖ ನೋಡಿ “ಅದರಲ್ಲೇನು ವಿಶೇಷ’? ಎಂದು ಉತ್ತರಿಸಿ ಮತ್ತೆ ಪತ್ರಿಕೆಯತ್ತ ಕಣ್ಣಾಡಿಸಿದರು. ಮತ್ತೆ ಪ್ರಶ್ನಿಸಿದಾಗ, “ಒಬ್ಬರು ಇನ್ನೊಬ್ಬರನ್ನು ದೂರುತ್ತಾರೆ. ಅಭಿವೃದ್ಧಿಯಾಗಬೇಕು ಎಂಬುದು ಯಾರ ಮನಸ್ಸಿನಲ್ಲಿಯೂ ಇಲ್ಲ’ ಎಂದರು.

Advertisement

ಕುಂಪಲದ ಕಡೆಗೆ ಹೋದಾಗ ಅಲ್ಲಿ ಚುನಾವಣೆಯ ಬ್ಯಾನರ್‌-ಫ್ಲೆಕ್ಸ್‌ ಬದಲು ಶ್ರದ್ಧಾಂಜಲಿ ಬ್ಯಾನರ್‌ಗಳೇ ಕಾಣಲು ಸಿಕ್ಕವು. ಮೂರು ಪ್ರತ್ಯೇಕ ದುರ್ಘ‌ಟನೆ ಗಳಲ್ಲಿ ಇಲ್ಲಿನ ಮೂವರು ಯುವಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಕುಂಪಲದಲ್ಲಿ ಅಕ್ಷರಶಃ ಸೂತಕದ ಛಾಯೆಯೇ ಇದೆ. ಆದರೂ ಹೊಟೇಲ್‌ ಮುಂಭಾಗದಲ್ಲಿ ಕಾಣಸಿಕ್ಕ ಯುವಕರಿ ಬ್ಬರನ್ನು ಮಾತನಾಡಿಸಿದಾಗ, “ಸದ್ಯ ಇಲ್ಲಿ ಎಲ್ಲರೂ ಬೇಸರದಲ್ಲಿದ್ದಾರೆ. ಸ್ವಲ್ಪ ದಿನ ಪ್ರಚಾರಕ್ಕೂ ಹೋಗಿಲ್ಲ. ಮುಂದೆ ನೋಡಬೇಕು’ ಎಂದು ತುಸು ಬೇಸರ ದಿಂದಲೇ ಉತ್ತರಿಸಿದರು. 

ಒಂದೇ ಪಕ್ಷ ಸರಕಾರ ಇದ್ದರೆ ಉತ್ತಮ
ಬೀರಿಗೆ ಹೋಗಿ ಮಡ್ಯಾರ್‌ ರಸ್ತೆಯಲ್ಲಿ ಸಾಗುವಾಗ ಹೊಸ ಮನೆ ಕೆಲಸ ನಡೆಯು ತ್ತಿತ್ತು. ದೇವದಾಸ್‌ ಕೋಟೆಕಾರ್‌ ಅವರು ಮಾತು ಶುರು ಮಾಡಿದರು, “ರಾಜ್ಯದಲ್ಲಿ ಒಂದು ಪಕ್ಷ, ಕೇಂದ್ರದಲ್ಲಿ ಇನ್ನೊಂದು ಪಕ್ಷದ ಸರಕಾರ ಇದ್ದರೆ ಅಭಿವೃದ್ಧಿ ಆಗುವು ದಿಲ್ಲ. ಎರಡೂ ಕಡೆ ಒಂದೇ ಸರಕಾರ ಇದ್ದರೇನೆ ಉತ್ತಮ’ ಎಂದರು. 

ಕೈಯಲ್ಲಿ ಬಸಳೆ ಕಟ್ಟು ಹಿಡಿದುಕೊಂಡು ಮೊಮ್ಮಗನ ಜತೆಗೆ ಮನೆ ದಾರಿಯಲ್ಲಿದ್ದ ಕೃಷ್ಣಪ್ಪ ಎಂಬವರು, “ಬೇರೆ ಬೇರೆ ಪಕ್ಷಗಳು ಚುನಾವಣೆ ಬಂದಾಗ ಅದು ಕೊಡ್ತೇವೆ, ಇದು ಕೊಡ್ತೇವೆ ಅಂತಾರೆ. ಆದರೆ ನಾವು ಸಿದ್ಧಾಂತ ನಂಬಿಕೊಂಡು ಬಂದವರು. ಹಿಂದೆ ನಾವು ಹೇಗಿದ್ದೆವು, ಈಗ ಹೀಗಿರಲು ಏನು ಕಾರಣ ಮತ್ತು ಇದಕ್ಕೆ ಯಾರು ಕಾರಣ ಎಂಬುದನ್ನರಿತು ಮತ ಹಾಕ್ತೇವೆ. ನಮ್ಮ ಮನೆಗೆ ಮತ ಕೇಳಲು ಬರದಿದ್ದರೂ ತೊಂದರೆ ಇಲ್ಲ. ನಮ್ಮ ಮತ ಆಗ ಯಾವು ದಕ್ಕೋ ಈಗಲೂ ಅದಕ್ಕೇ’ ಎಂದರವರು. 

ಗೆದ್ದ ಬಳಿಕವೂ ಬನ್ನಿ
ಈಗ ಮನೆ ಮನೆಗೆ ಬಂದು ಮತ ಕೇಳುವವರು, ಗೆದ್ದ ಬಳಿಕವೂ ಬಂದು ನಮ್ಮ ಸಮಸ್ಯೆಗಳನ್ನು ಆಲಿಸುವಂತಾದರೆ ನಮಗೆ ನಂಬಿಕೆ ಬರು ತ್ತದೆ. ಕನಿಷ್ಠ ಈಗ ಬರುವ ಬೂತ್‌ ಮಟ್ಟದ ಕಾರ್ಯಕರ್ತರಾದರೂ ಅಭ್ಯರ್ಥಿ ಗೆದ್ದ ಬಳಿಕ ಪ್ರತೀ ತಿಂಗಳಿಗೊಮ್ಮೆ ನಮ್ಮ ಸಮಸ್ಯೆ ನಿವಾರಿಸು ವಂತಾಗಬೇಕು. ಇದು ಗೆದ್ದವರಿಗೆ ಮಾತ್ರ ಅಲ್ಲ; ಸೋತವರೂ ಇಂಥ ನಡವಳಿಕೆ ತೋರಿದರೆ ಮುಂದೆ ಅವರಿಗೂ ಅವಕಾಶ ಸಿಗಬಹುದು.

– ನಮಿತಾ ಪಿಲಾರ್‌.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next