ಉಳ್ಳಾಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಪರವಾಗಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶಿಸಿದರು. ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಗಳೂರು ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ಬಿಜೆಪಿಯ ತೆಕ್ಕೆಗೆ ತೆಗೆದುಕೊಳ್ಳವ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಹುಮ್ಮಸು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳವಾರ ನಡೆದ ರೋಡ್ ಶೋ ಮೂಲಕ ವಾಹನ ಜಾಥಾದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕೊಲ್ಯ ಸೌಭಾಗ್ಯ ಸದನದ ನಾಗಬ್ರಹ್ಮಸ್ಥಾನದಿಂದ ನಾಗನಕಟ್ಟೆವರೆಗೆ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಪರ ಕೊಲ್ಯದ ನಾಗಬ್ರಹ್ಮಸ್ಥಾನದಿಂದ ನಾಗನಕಟ್ಟೆವರೆಗೆ ರೋಡ್‌ಶೋ ನಿಗದಿಯಾಗಿದ್ದು, ಸಾವಿರಾರ ಕಾರ್ಯಕರ್ತರು ಅಮಿತ್ ಶಾ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಕೀಲು ಕುದುರೆ, ಗೊಂಬೆ ನೃತ್ಯ, ನಾಸಿಕ್ ಬ್ಯಾಂಡ್, ಚೆಂಡೆ, ರೋಡ್‌ಶೋಗೆ ಮೆರಗು ನೀಡಿದರೆ ಕಾರ್ಯಕರ್ತರು ಜೈಕಾರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೊಲ್ಯದಿಂದ ವಿಶೇಷ ವಾಗಿ ವಿನ್ಯಾಸಗೊಳಿಸಿದ್ದ ವಾಹನದಲ್ಲಿ ಕಾಪಿಕಾಡು, ತೊಕ್ಕೊಟ್ಟು ಓವರ್‌ಬ್ರಿಡ್ಜ್ ವರೆಗೆ ಅಮಿತ್ ಶಾ ಕಾರ್ಯಕರ್ತರನ್ನು ಹುರಿದುಂಬಿಸಿದರೆ ಸಂಚಾರಕ್ಕೆ ತಡೆ ಮತ್ತು ನಿಗದಿಯಾಗಿದ್ದ ಇನ್ನೊಂದು ಕಾರ್ಯಕ್ರಮಕ್ಕೆ ಹೋಗುವ ನಿಟ್ಟಿನಲ್ಲಿ ತೊಕ್ಕೊಟ್ಟು ಓವರ್‌ಬ್ರಿಡ್ಜ್ವರೆಗೆ ರೋಡ್ ಶೋ ಕೊನೆಗೊಳಿಸಿ ಮಂಗಳೂರಿಗೆ ವಾಪಾಸಾದರು. ಕಾರ್ಯಕರ್ತರು ನಾಗನಕಟ್ಟೆವರೆಗೆ ರೋಡ್‌ಶೋ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಬಿಜೆಪಿ ಮುಖಂಡರು, ಜಿಲ್ಲಾ ನಾಯಕರು ಮಂಗಳೂರು ಕ್ಷೇತ್ರದ ಬಿಜೆಪಿ ಮುಖಂಡರು ರೋಡ್ ಶೋದಲ್ಲಿ ಭಾಗವಹಿಸಿದರು.
ಕಾರ್ಯಕರ್ತರ ಫೋಟೋ ತೆಗೆದ ಶಾ
ಕಾರ್ಯಕರ್ತ ಉತ್ಸಾಹವನ್ನು ಕಂಡು ಮಾದ್ಯಮದ ಪ್ರತಿನಿಧಿಯೊಬ್ಬರನ್ನು ವಾಹನಕ್ಕೆ ಕರೆಸಿ ಅವರ ಕೆಮರಾದಿಂದ ಕಾರ್ಯಕರ್ತರ ಛಾಯಾಚಿತ್ರವನ್ನು ತೆಗೆದರು. ಬಳಿ ಕೆಮರಾದಲ್ಲಿ ಸೆರೆಯಾಗಿದ್ದ ತನ್ನ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾ ಎರಡನೇ ಭೇಟಿ
ಉಳ್ಳಾಲಕ್ಕೆ ಅಮಿತ್ ಶಾ ಅವರ 2ನೇ ಭೇಟಿ ಇದಾ ಗಿದೆ. 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಯೋಧರ ಬಲಿದಾನ ಸ್ಮರಣೆ ಸಂದರ್ಭದಲ್ಲಿ ಅವರು ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಪಕ್ಷದ ಕಾರ್ಯಕ್ರಮ ಇದು ಪ್ರಥಮ ಭೇಟಿ.