Advertisement

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್ ಗೆ ಶಿಕ್ಷೆ ಪ್ರಕಟ

11:49 PM Mar 16, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ಪ್ರಕರಣದ ಆರೋಪಿ ಆದಿತ್ಯ ರಾವ್‌ (39) ಮೇಲಿನ ಆರೋಪ ಸಾಬೀತಾಗಿದ್ದು, 20 ವರ್ಷಗಳ ಕಠಿನ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

Advertisement

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967 ಸೆಕ್ಷನ್‌ 16ರಡಿ 20 ವರ್ಷಗಳ ಕಠಿನ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 6 ತಿಂಗಳ ಶಿಕ್ಷೆ, ನ್ಪೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್‌ 4ರ ಅನ್ವಯ 5 ವರ್ಷಗಳ ಕಠಿನ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲವಾದರೆ ಮತ್ತು 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶರಾದ ಪಲ್ಲವಿ ವಿಚಾರಣೆಯನ್ನು ಪೂರ್ತಿಗೊಳಿಸಿ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಒಟ್ಟು 107 ಸಾಕ್ಷಿದಾರರ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

ಘಟನೆಯ ವಿವರ
ಆರೋಪಿ ಆದಿತ್ಯ 2020 ಜ. 20ರಂದು ಬೆಳಗ್ಗೆ ವಿಮಾನ ನಿಲ್ದಾಣದ ಟಿಕೆಟ್‌ ಕೌಂಟರ್‌ ಬಳಿ ಪ್ರಯಾಣಿಕರು ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಾಂಬ್‌ ಇರುವ ಬ್ಯಾಗ್‌ ಇರಿಸಿ ಬಳಿಕ ಪಾರ್ಕಿಂಗ್‌ ಪ್ರದೇಶದಲ್ಲಿದ್ದ ರಿಕ್ಷಾ ಏರಿ ಹೋಗಿದ್ದನು. ಅನುಮಾನಾಸ್ಪದ ಬ್ಯಾಗನ್ನು ಗಮನಿಸಿದ ನಿಲ್ದಾಣದ ಅಧಿಕಾರಿಗಳು ತಜ್ಞರಿಂದ ಪರಿಶೀಲಿಸಿದಾಗ ಸ್ಫೋಟಕಗಳು ಪತ್ತೆಯಾಗಿದ್ದವು. ಬಳಿಕ ಕೆಂಜಾರಿನ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬಾಂಬ್‌ ಪತ್ತೆ ದಳದ ತಜ್ಞರ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿತ್ತು.

ಆರೋಪಿ ಆದಿತ್ಯ ಬೆಂಗಳೂರಿಗೆ ತೆರಳಿ ಜ. 22ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದನು. ಆತನನ್ನು ಹಲಸೂರು ಗೇಟ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಬಳಿಕ ಮಂಗಳೂರಿನ ಪೊಲೀಸ್‌ ತಂಡ ಆತನನ್ನು ಬಂಧಿಸಿ ಕರೆತಂದಿತ್ತು.

Advertisement

ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಪುನಃ ಪೊಲೀಸ್‌ ಕಸ್ಟಡಿಗೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ವಿಮಾನ ನಿಲ್ದಾಣದ ಸಿಐಎಸ್‌ಎಫ್‌ ಇನ್‌ಸ್ಪೆಕ್ಟರ್‌ ಮಾನಸ ನಾಯಕ್‌ ನೀಡಿರುವ ದೂರಿನಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಪೊಲೀಸ್‌ ಆಯುಕ್ತ ಡಾ| ಹರ್ಷ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತನಿಖೆಯನ್ನು ಪೂರ್ಣಗೊಳಿಸಿ ಒಟ್ಟು 700 ಪುಟಗಳ ಆರೋಪ ಪಟ್ಟಿ ಸಿದ್ಧ ಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೊರೊನಾ ಪ್ರಯುಕ್ತ ಬಾಕಿ ಉಳಿದಿದ್ದ ಗುರುತು ಪತ್ತೆ ಪರೇಡ್‌ ಮತ್ತು ಬ್ರೈನ್‌ ಮ್ಯಾಪಿಂಗ್‌ ಪ್ರಕ್ರಿಯೆಯನ್ನೂ ಲಾಕ್‌ಡೌನ್‌ ತೆರವಾದ ಬಳಿಕ ಪೂರ್ತಿಗೊಳಿಸಲಾಗಿತ್ತು.

ಎರಡು ವರ್ಷಗಳಿಂದ (2020 ಫೆಬ್ರವರಿ 1ರಿಂದ) ಆತ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದನು. ತನ್ನ ಪರ ಯಾವುದೇ ವಕೀಲರನ್ನು ನೇಮಿಸಿಕೊಂಡಿರಲಿಲ್ಲ.

ತಪ್ಪೊಪ್ಪಿಕೊಂಡ ಆರೋಪಿ
ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಆದಿತ್ಯ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಕಾನೂನು ಪ್ರಕಾರ ಶಿಕ್ಷೆ ಕೊಡಿ ಎಂದು ಮನವಿ ಮಾಡಿದ್ದನು. ಪ್ರಕರಣ ಗಂಭೀರ ಸ್ವರೂಪದ್ದಾದ ಕಾರಣ ನ್ಯಾಯಾಂಗ ಕಲಾಪದ ಪ್ರಕಾರವೇ ನಡೆಸುವ ಅನಿವಾರ್ಯ ಇತ್ತು. ಸಾಕ್ಷಿಗಳ ವಿಚಾರಣೆ ಸಹಿತ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
– ಹರಿಶ್ಚಂದ್ರ ಉದ್ಯಾವರ,
ಪಬ್ಲಿಕ್‌ ಪ್ರಾಸಿಕ್ಯೂಟರ್‌

Advertisement

Udayavani is now on Telegram. Click here to join our channel and stay updated with the latest news.

Next