ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಚಂಡೀಗಢ, ತಿರುವನಂತಪುರ ಹಾಗೂ ಲಕ್ನೋ ವಿಮಾನ ನಿಲ್ದಾಣಗಳು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಗೆ ಪಾತ್ರವಾಗಿವೆ.
ಈ ನಾಲ್ಕು ನಿಲ್ದಾಣಗಳು ಒಟ್ಟು 10 ವಿಭಾಗಗಳಲ್ಲಿ ಪ್ರಯಾಣಿಕರಿಗೆ ನೀಡಿದ ಉತ್ಕೃಷ್ಟ ಸೇವೆ, ವಿಶ್ವ ಗುಣಮಟ್ಟದ ಸೌಲಭ್ಯಗಳಿಗಾಗಿ ಈ ಪುರಸ್ಕಾರ ಸಂದಿದೆ.
ಜಾಗತಿಕ ಸಂಸ್ಥೆಯಾಗಿರುವ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ಎಸಿಐ) ವತಿಯಿಂದ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ (ಎಎಸ್‌ಕ್ಯೂ)ಯು ಈ ಸರ್ವೆ ನಡೆಸಿದೆ. 2019ರಲ್ಲಿ ಜಗತ್ತಿನ 356 ವಿಮಾನ ನಿಲ್ದಾಣಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸರ್ವೇ ತಂಡವು ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ ಪ್ರಯಾಣಿಕರು ವ್ಯಕ್ತಪಡಿಸುವ ಅಭಿಪ್ರಾಯ ಹಾಗೂ ಪ್ರಯಾಣಿಕರ ಸೇವಾ ಸಂತೃಪ್ತಿಯನ್ನು ಆಧರಿಸಿ ಎಎಸ್‌ಕ್ಯೂ ಅಂಕ ನೀಡಲಾಗುತ್ತದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕರ ಸೇತುವೆ ನಿರ್ಮಾಣ, ಟರ್ಮಿನಲ್ ಕಟ್ಟಡದ ಸುಧಾರಣೆ ಮೂಲಕ ಪರಿಸರ ಸುಂದರೀಕರಣ, ವಿಮಾನಗಳ ಮಾಹಿತಿ ಪ್ರದರ್ಶನ ಫಲಕ ಅಳವಡಿಕೆ, ಆ್ಯಪ್ ಆಧರಿತ ಕ್ಯಾಬ್ ಆಗ್ರಿಗೇಟರ್ ವ್ಯವಸ್ಥೆ, ಅಟೊಮ್ಯಾಟಿಕ್ ಎಲೆಕ್ಟ್ರಾನಿಕ್ ಆಕ್ಸೆಸ್ ಕಂಟ್ರೋಲ್, ಆಗಮನ-ನಿರ್ಗಮನಕ್ಕೆ ಇ-ಗೇಟ್ ವ್ಯವಸ್ಥೆ, ಟರ್ಮಿನಲ್ ಹಾಗೂ ನಗರದ ಕಡೆಗೆ ಉತ್ತಮ ಸೈನೇಜ್ ಫಲಕಗಳು, ಎಟಿಎಂ, 500ರಷ್ಟು ಟ್ರಾಲಿಗಳು, ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ಮಂಗಳೂರು ವಿಮಾನ ನಿಲ್ದಾಣ ಹೊಂದಿವೆ. ಅಂಗವಿಕಲರಿಗಾಗಿ ಪೂರಕ ವ್ಯವಸ್ಥೆ, ಸಹಾಯ ಕೇಂದ್ರ, ಅನೇಕ ನಗದು ರಹಿತ ಪಾವತಿ ವ್ಯವಸ್ಥೆ, ಟರ್ಮಿನಲ್ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಕಲೆ, ಜಾನಪದ ಪ್ರತಿಬಿಂಬಿಸುವ ಪ್ರದರ್ಶನವನ್ನು ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ ಎಂದು ಸರ್ವೇಯಲ್ಲಿ ಉಲ್ಲೇಖೀಸಲಾಗಿದೆ.