ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಅಕ್ರಮವಾಗಿ ಗುದದ್ವಾರದಲ್ಲಿರಿಸಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಚಾಲಾಕಿಗಳಿಬ್ಬರು ಗುರುವಾರ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ತಪಾಸಣೆ ವೇಳೆ ದೀಪಕ್ ಇಂದರ್‌ದಾಸ್ ಸಿದ್ವಾನಿ ಮತ್ತು ನಿರ್ಮಲ್ ದಾಸ್ ಎನ್ನುವವರನ್ನು ಅನುಮಾನಗೊಂಡು ಇನ್ನಷ್ಟು ತಪಾಸಣೆಗೊಳಪಡಿಸಿದಾಗ ಗುದದ್ವಾರದಲ್ಲಿ ಚಿನ್ನ ಅಡಗಿಸಿಕೊಂಡಿರುವುದು ಪತ್ತೆಯಾಗಿದೆ.
ಇಬ್ಬರ ಗುದದ್ವಾರಗಳಲ್ಲಿದ್ದ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದ್ದು, ತೂಕ 1 ಕೆ.ಜಿ.240 ಗ್ರಾಂಗಳಷ್ಟಿದೆ. ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದು ಇಬ್ಬರನ್ನೂ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ದುಬೈನಲ್ಲಿ ಕಡಿಮೆ ಬೆಲೆಗೆ ಚಿನ್ನ ದೊರಕುವ ಹಿನ್ನಲೆಯಲ್ಲಿ ಕೆ.ಜಿಯಷ್ಟು ಚಿನ್ನ ಖರೀದಿಸಿದರೆ ತೆರಿಗೆ ಇಲ್ಲದೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಉದ್ದೇಶದೊಂದಿಗೆ ಸಾಗಾಣಿಗೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಾಂಡೋಮ್‌ಗಳಲ್ಲಿ ತುಂಬಿ ಗುದದ್ವಾರದೊಳಗೆ ಚಿನ್ನವನ್ನು ತುರುಕಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.